ವಿರಾಜಪೇಟೆ ಸೆ.19 : ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಗಣಪತಿ ಗುಡಿಯಲ್ಲಿ 41 ನೇ ವರ್ಷದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಗಣಹೋಮ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನದ ಅರ್ಚಕರುಗಳಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ರವರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಸಮೀಪದಲ್ಲಿಯೇ ಇರುವ ಸಭಾ ಭವನದ ನೂತನ ವಧು ವರರ ಕೊಠಡಿಯನ್ನು ದೇವಸ್ಥಾನದ ಉಪಾಧ್ಯಕ್ಷರಾದ ನಂದ ಬಿ. ಜಿ. ರವರು ಉದ್ಘಾಟಿಸಿದರು. ಗಣೇಶೋತ್ಸವದ ಪ್ರಯುಕ್ತ ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣ -ರಾಧಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಕ್ಕಳು ರಾಧಕೃಷ್ಣರಾಗಿ ಮಿಂಚಿದರು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ದೇವಸ್ಥಾನವನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.











