ಮಡಿಕೇರಿ ಸೆ.20 : ಆಧುನೀಕತೆಗೆ ಅನುಗುಣವಾಗಿ ಹಣಕಾಸಿನ ವ್ಯವಹಾರಗಳಲ್ಲಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. 2022-23ನೇ ಸಾಲಿನಲ್ಲಿ 11.04 ಕೋಟಿ ರೂ. ಲಾಭವನ್ನು ಹೊಂದಿಕೊಂಡಿರುವುದಾಗಿ ಬ್ಯಾಂಕ್ ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ 15 ಶಾಖೆಗಳ ವ್ಯಾಪ್ತಿಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಎಟಿಎಂ ಸೌಲಭ್ಯವನ್ನು ಕಲ್ಪಿಸಲಾಗಿದೆಯಲ್ಲದೆ, ಎಟಿಎಂ ಇಲ್ಲದೆ ಇರುವ 6 ಶಾಖಾ ವ್ಯಾಪ್ತಿಯಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹಳ್ಳಿ ಹಳ್ಳಿಗಳಿಗೆ ಮತ್ತು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಇತರ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸರಿ ಸಮಾನವಾಗಿ ಗ್ರಾಹಕರ ಉತ್ತಮ ಸೇವೆ ಒದಗಿಸಲು ಬ್ಯಾಂಕ್ ಶ್ರಮಿಸುತ್ತಿದೆಯೆಂದು ಸ್ಪಷ್ಟಪಡಿಸಿದರು.
ಮನೆ ಸಾಲದ ಗರಿಷ್ಠ ಮಿತಿ 75 ಲಕ್ಷಕ್ಕೆ ಹೆಚ್ಚಳ- ಮನೆ ಸಾಲದ ಗರಿಷ್ಠ ಮಿತಿ ಈ ಹಿಂದೆ 20 ಲಕ್ಷ ರೂ.ಗಳಿತ್ತಾದರೆ, ಆರ್‍ಬಿಐ ನಿರ್ದೇಶನದಂತೆ ಗರಿಷ್ಠ 75 ಲಕ್ಷಕ್ಕೆ ಹೆಚ್ಚಿಸುವ ಮೂಲಕ, ದೊಡ್ಡ ಮೊತ್ತದ ಸಾಲದ ಬೇಡಿಕೆ ಇದ್ದ ಹಾಲಿ ಗ್ರಾಹಕರನ್ನು ಬ್ಯಾಂಕಿನಲ್ಲೆ ಉಳಿಸಿಕೊಳ್ಳಲು ಸಾಧ್ಯವಾಗಿದೆಯೆಂದು ಸಂತಸ ವ್ಯಕ್ತಪಡಿಸಿ, ಹೊಸ ಮತ್ತು ಹಳೆಯ ವಾಹನಗಳ ಖರೀದಿಗಲ್ಲದೆ, ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸುವ ಸಲುವಾಗಿ ಸಾಮಾನ್ಯ ವಾಹನ ಸಾಲದ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆಯೆಂದು ಮಾಹಿತಿಯನ್ನಿತ್ತರು.
ವಿದ್ಯಾ ಸಹಕಾರಿ- ಮಕ್ಕಳ ಪದವಿ ಮತ್ತು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್ ಮೂಲಕ ಗರಿಷ್ಠ 60 ಲಕ್ಷ ಸಾಲವನ್ನು ಒದಗಿಸುವ ‘ವಿದ್ಯಾ ಸಹಕಾರಿ’ ಯೋಜನೆ ಮುಂದಿನ ಅಕ್ಟೋಬರ್ 1 ರಿಂದ ಆರಂಭಿಸಲಾಗುತ್ತಿದೆ. ಇದು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಮಾಡುತ್ತಿರುವುದಾಗಿ ಗಣಪತಿ ಅವರು ಮಾಹಿತಿಯನ್ನಿತ್ತರು.
ನೂತನ ಶಾಖೆಗಳ ಆರಂಭ- ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಇದೇ ಅಕ್ಟೋಬರ್ ಒಳಗಾಗಿ ಬ್ಯಾಂಕಿನ 23ನೇ ಶಾಖೆಯನ್ನು, ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲಿ ಇದೇ ಸೆಪ್ಟೆಂಬರ್ ಅಂತ್ಯದ ಒಳಗಾಗಿ 22ನೇ ಶಾಖೆ ಮತ್ತು ಭಾಗಮಂಡಲದಲ್ಲಿ ಮುಂದಿನ ಸಾಲಿನ ಜ.24 ರಂದು 24ನೇ ಶಾಖೆಯನ್ನು ಆರಂಭಿಸಲಾಗುತ್ತಿದೆಯೆಂದು ತಿಳಿಸಿದರು.
ಸಹಕಾರಿ ಸಂಘಗಳಿಗೆ ಶೇ.12 ಡಿವಿಡೆಂಡ್- ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ವ್ಯಾಪ್ತಿಯ 286 ಸಹಕಾರ ಸಂಘಗಳಿಗೆ ಶೇ.12 ರಷ್ಟು ಡಿವಿಡೆಂಡ್ ನೀಡುತ್ತಿದೆ. ಈ ಪ್ರಮಾಣದ ಡಿವಿಡೆಂಡ್ ನೀಡುತ್ತಿರುವ ಏಕೈಕ ಬ್ಯಾಂಕ್ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಎಂದು ಅಪೆಕ್ಸ್ ಬ್ಯಾಂಕಿನ ಮಹಾಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಗೋದಾಮು ನಿರ್ಮಾಣ-ಪಿಕ್ ಅಪ್ ವ್ಯಾನ್ ಖರೀದಿ- ಕೊಡಗನ್ನು ಒಳಗೊಂಡಂತೆ ರಾಜ್ಯದ ಆರು ಜಿಲ್ಲೆಗಳ ಗುಡ್ಡಗಾಡು ಪ್ರದೇಶದ ರೈತರಿಗೆ ಗೋದಾಮು ನಿರ್ಮಾಣಕ್ಕೆ 20 ಲಕ್ಷ ರೂ. ಸಾಲ ಸೌಲಭ್ಯ ದೊರಕಲಿದೆ. ಈ ಯೋಜನೆಯಡಿ ವಾರ್ಷಿಕ ಗರಿಷ್ಠ 50 ರೈತರಿಗೆ ಸೌಲಭ್ಯ ದೊರಕಲಿದೆ. ಇದೇ ರೀತಿ 100 ರೈತರಿಗೆ ಪಿಕ್ ಅಪ್ ವಾಹನ ಖರೀದಿಗೆ ಸಾಲ ಸೌಲಭ್ಯ ದೊರಕಲಿದೆಯೆಂದು ಮಾಹಿತಿ ನೀಡಿದರು.
ಆದರೆ, ಈ ಯೋಜನೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ಯಾವೆಲ್ಲ ಭಾಗವನ್ನು ಗುಡ್ಡಗಾಡು ಎಂದು ಘೋಷಿಸುತ್ತಾರೋ ಆ ಪ್ರದೇಶಗಳ ರೈತರಿಗೆ ಮಾತ್ರ ಈ ಸೌಲಭ್ಯ ದೊರಕುತ್ತದೆ. ಆದರೆ, ಯೋಜನೆ ಇಡೀ ಜಿಲ್ಲೆಗೆ ಅನ್ವಯಿಸಬೇಕೆಂದು ಮಹಾ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸುವುದಾಗಿ ಗಣಪತಿ ಅವರು ಮಾಹಿತಿ ನೀಡಿದರು.
ಮಹಾಸಭೆ- ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 98ನೇ ವಾರ್ಷಿಕ ಮಹಾಸಭೆ ಸೆ.20 ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ನಡೆಯಲಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಕನ್ನಂಡ ಎ. ಸಂಪತ್, ಕಿಮ್ಮುಡಿರ ಎ. ಜಗದೀಶ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ್ ಉಪಸ್ಥಿತರಿದ್ದರು.









