ವಿರಾಜಪೇಟೆ ಸೆ.22 : ಸ್ವ ಉದ್ಯೋಗ ತರಬೇತಿಗಳನ್ನು ನಿರಂತರವಾಗಿ ಹಮ್ಮಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಲೀಲಾವತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಿ.ಸಿ ಟ್ರಸ್ಟ್, ವಿರಾಜಪೇಟೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ವಾಟೆಕಾಡು ಕಣ್ವ ಮುನಿಶ್ವರ ದೇವಾಲಯದ ಸಭಾಂಗಣದಲ್ಲಿ ಯೋಜನೆಯ ಸದಸ್ಯರುಗಳಿಗೆ ಸ್ವ ಉದ್ಯೋಗದೊಂದಿಗೆ ಸ್ವಾವಲಂಬನೆಯ ಮೂಲಕ ಮಹಿಳೆಯರ ಬದುಕು ಹಸನಾಗಿಸಲು ಅಣಬೆ ಬೇಸಾಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಇಂದು ಸ್ವ ಉದ್ಯೋಗ ಅನ್ನುವುದು ಅತ್ಯಂತ ಪ್ರಚಲಿತ ಹಾಗೂ ಸರ್ವರಿಗೂ ಸಲ್ಲುವ ಉದ್ಯೋಗವಾಗಿದೆ. ಇಂದಿನ ದಿನಗಳಲ್ಲಿ ವಿಶೇಷವಾಗಿ ಮಹಿಳೆಯರು ಹಲವಾರು ವಿಧದ ಸ್ವ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಸ್ವಾವಲಂಬನೆಯ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೂಡಾ ಈ ಹಾದಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಡಾ.ಡಿ ವೀರೇಂದ್ರ ಹೆಗ್ಗಡೆಯವರು ರುಡ್ಸೆಟ್ ಸಂಸ್ಥೆಯ ಮೂಲಕ ಸ್ವ ಉದ್ಯೋಗ ಕ್ರಾಂತಿಯನ್ನೇ ಮಾಡಿರುತ್ತಾರೆ. ತಾವುಗಳು ಕೂಡಾ ಇತರರ ಲೆಕ್ಕ ಬರೆಯುವುದಕ್ಕಿಂತ ನಮ್ಮ ಲೆಕ್ಕಗಳನ್ನು ನಾವುಗಳೇ ಬರೆಯುವಂತೆ ಆಗಲಿ ಅನ್ನುವುದೇ ನಮ್ಮ ಆಶಯವಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲುವಿನ ವಿಷಯ ತಜ್ಞರಾದ ಡಾ.ಪ್ರಭಾಕರ್ ಮಾತನಾಡಿ, ಅಣಬೆ ಬೇಸಾಯ ಕ್ರಮಗಳು, ಬೆಳೆಯುವ ವಿಧಾನಗಳು, ಆಹಾರ ಪದ್ಧತಿಗೆ ಸಹಕಾರಿ, ಮಾರುಕಟ್ಟೆ ವ್ಯವಸ್ಥೆ ಎಂಬೆಲ್ಲ ವಿಚಾರ ಬಗ್ಗೆ ಸವಿಸ್ತಾರವಾದ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮುಖೇನವಾಗಿ ನೀಡಿದರು.
ಇದೇ ಸಂದರ್ಭ ಉಚಿತವಾಗಿ ಅಣಬೆ ಬೀಜಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ದಿನೇಶ್ ಬಿ, ವೀಣಾ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಕು. ಶ್ರೇಯಾ, ಸೇವಾಪ್ರತಿನಿಧಿ ಕಾವೇರಿ ಪಾಲ್ಗೊಂಡಿದ್ದರು.
ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾಟೆಕಾಡು ಒಕ್ಕೂಟದ ವತಿಯಿಂದ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನೆಯ ಕಾರ್ಯಕರ್ತರು, ಸೇವಾಪ್ರತಿನಿಧಿಗಳು, ಸದಸ್ಯರುಗಳು ಭಾಗವಹಿಸಿದ್ದರು.







