ವಿರಾಜಪೇಟೆ ಸೆ.25 : ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.
ವಿರಾಜಪೇಟೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೆಸ್ಕಾಮ್ ಉಪವಿಭಾಗದ ಪಿ.ಎಸ್. ಸುರೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗಣೇಶೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದು ಜನರಲ್ಲಿ ಐಕ್ಯತೆ ಮೂಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮನೋಭಾವನೆ ಮೂಡಿಸುತ್ತದೆ ಎಂದರು.
ಚೆಸ್ಕಾಮ್ ಲೈನ್ ಮ್ಯಾನ್ ಗಳನ್ನು ಗುರುತಿಸಿ ದೇವಸ್ಥಾನದ ಆಡಳಿತ ಮಂಡಳಿಯವರು ಸನ್ಮಾನಿಸುತಿರುವುದು ಗಮನಾರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ರಾಮಕೃಷ್ಣ ಮಾತನಾಡಿ, ಇಂದಿನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಸಂತಸ. ಪ್ರತೀ ವರ್ಷವೂ ದೇವಸ್ಥಾನದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಮೂಲಕ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಆಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೇಟೋಳಿ ವಿಭಾಗದ ಚೆಸ್ಕಾಮ್ ನ ಲೈನ್ ಮ್ಯಾನ್ ನಂಜುಂಡಸ್ವಾಮಿ, ದೊರೆ ಸ್ವಾಮಿ ಹಾಗೂ ಅನಿಲ್ ಮೆನೇಜಸ್, ಹೆಗ್ಗಳ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಕ್ಷತಾ ಅವರನ್ನು ಹಾಗೂ ಕನ್ನಡ ಭಾಷಾ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರಾದ ಅಭಿಯಾಜೋಸ್, ಗಾಯತ್ರಿ ರವರನ್ನು ಸನ್ಮಾನಿಸಲಾಯಿತು. ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುಟಾಣಿ ಮಕ್ಕಳನ್ನು ಸಜ್ಜು ಗೊಳಿಸಿದ ಅಂಗನವಾಡಿ ಕಾರ್ಯಕರ್ತೆ ರತಿ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಳದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು. ರಾಮನಗರದ ಅಂಗನವಾಡಿ ಮಕ್ಕಳ ನೃತ್ಯವು ಗಮನ ಸೆಳೆಯಿತು.
ವೇದಿಕೆಯಲ್ಲಿ ದೇವಾಲಯದ ಉಪಾಧ್ಯಕ್ಷ ನಂದ ಬೋರ್ಕರ್, ಕಾರ್ಯದರ್ಶಿ ಸುಮನ ಉಪಸ್ಥಿತರಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.







