ವಿರಾಜಪೇಟೆ ಸೆ.25 : ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸಿ.ದಯಾನಂದ ಅಭಿಪ್ರಾಯಪಟ್ಟರು.
ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್. ಎಸ್. ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ರಾಷ್ಟ್ರದ ಪ್ರಗತಿಗೆ ಶ್ರಮಸಬೇಕೆಂದರು. ಶಿಸ್ತು ಬದ್ದ ಜೀವನ, ಉತ್ತಮ ನಡತೆ, ಪ್ರಾಮಾಣಿಕತೆ ಇವು ಸ್ವಯಂ ಸೇವಕರ ಪ್ರಮುಖ ಲಕ್ಷಣ ಎಂದು ತಿಳಿಸಿದರು. ನಮ್ಮ ಕರ್ತವ್ಯವನ್ನು ನಾವು ಮಾಡಿದಾಗ ಮಾತ್ರ ಇತರರಿಗೆ ಮಾದರಿಗಳಾಗುತ್ತೇವೆ ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯ ವನ್ನು ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಕರ್ ಪ್ರತಿಜ್ಞಾ ವಿಧಿಯನ್ನು ಭೋದಿಸಿ, ಎನ್. ಎಸ್. ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಕಾರ್ಯ ಒಂದೇ ಆಗಿದ್ದು ಅದು ಸಮಾಜದ ಸೇವೆಯಾಗಿದೆ. ಈ ಎರಡೂ ಘಟಕಗಳು ಸ್ವಾಸ್ತ್ಯ ಸಮಾಜದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ನುಡಿದರು.
ವಿದ್ಯಾರ್ಥಿಗಳು ತಮ್ಮನ್ನು ತಾವು ಕಾಲೇಜು ಹಾಗೂ ಸಮಾಜದಲ್ಲಿ ಗುರುತಿಸುದರ ಜೊತೆಗೆ ಮೌಲ್ಯಯುತ ಜೀವನ ನಡೆಸಲು ಎನ್. ಎಸ್. ಎಸ್. ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಸ್ವಯಂ ಸೇವಾ ವಿದ್ಯಾರ್ಥಿಗಳು ಸ್ವೀಕರಿಸಿದ ಪ್ರತಿಜ್ಞೆಯೊಂದಿಗೆ ಅದನ್ನು ದಿನನಿತ್ಯ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾತ್ರವಲ್ಲದೆ ಕ್ರಿಯಾಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸ್ವಯಂ ಸೇವಾ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಮಾದರಿ ಆಗಿರಬೇಕೆಂದು ಹೇಳಿದರು.
ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿಗಳಾದ ಬಿ. ಎನ್. ಶಾಂತಿಭೂಷಣ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸ್ನೇಹ ನಿರೂಪಿಸಿದರು. ಪ್ರತೀಕ್ ವಂದಿಸಿದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಎನ್. ಎಸ್. ಎಸ್, ರೆಡ್ ಕ್ರಾಸ್ ಘಟಕದ ನಾಯಕರುಗಳು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು.







