ಮಡಿಕೇರಿ ಅ.2 : ನಮ್ಮಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕನ ಕರ್ತವ್ಯ ಎಂದು ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ತಿಳಿಸಿದರು.
ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ನಗರದ ಅಬ್ಬಿ ಫಾಲ್ಸ್ ಸಮೀಪ ನಡೆದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಬದುಕಿನಲ್ಲಿ ಸ್ವಚ್ಛತೆ ಬಹು ಮುಖ್ಯವಾಗಿದೆ. ನಮ್ಮ ಮನೆ ಮಾತ್ರವಲ್ಲದೇ ಸುತ್ತ-ಮುತ್ತಲಿನ ಪರಿಸರದಲ್ಲಿಯೂ ನಾವು ಸ್ವಚ್ಛತೆಯನ್ನು ಕಾಪಾಡಬೇಕು. ಇದರಿಂದ ಉತ್ತಮ ಆರೋಗ್ಯದ ಜೊತೆಗೆ ನಮ್ಮ ಪರಿಸರವೂ ಸಹ ಸುಂದರವಾಗಿರುತ್ತದೆ ಎಂದರು.
ಪ್ರಧಾನಮಂತ್ರಿ ಅವರ ಆಶಯದಂತೆ ದೇಶಾದ್ಯಂತ ಒಂದು ಗಂಟೆಗಳ ಕಾಲ ಶ್ರಮದಾನ ಮಾಡಲಾಗಿದೆ. ಇದರ ಅಂಗವಾಗಿ ಅಬ್ಬಿ ಜಲಪಾತದ ಬಳಿ ಜಿಲ್ಲಾ ಮಟ್ಟದಲ್ಲಿ “ಬೃಹತ್ ಸ್ವಚ್ಛತಾ ಆಂದೋಲನ” ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಜಿಲ್ಲೆಯ 103 ಗ್ರಾಮಪಂಚಾಯಿತಿಗಳಲ್ಲಿಯೂ ಏಕ ಕಾಲದಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿದೆ ಎಂದು ತಿಳಿಸಿದರು.
ಇದೇ ವೇಳೆ ಅಂಗಡಿ ಮಾಲೀಕರು ಜವಾಬ್ದಾರಿಯುತವಾಗಿ ಕಸವನ್ನು ಸಂಗ್ರಹಿಸಿ, ಸ್ವಚ್ಛತೆಯನ್ನು ಕಾಪಾಡಬೇಕು. ಯಾವುದೇ ಅಂಗಡಿಗಳ ಮಾಲೀಕರು ಸ್ವಚ್ಛತೆ ಕಾಪಾಡದೆ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡಿದಲ್ಲಿ ಅಂತಹವರ ಟೆಂಡರನ್ನು ರದ್ದು ಪಡಿಸಲಾಗುವುದು ಎಂದು ಜಿ.ಪಂ. ಸಿ ಇ ಒ ಅವರು ಎಚ್ಚರಿಕೆ ನೀಡಿದರು.
ಜಿ.ಪಂ. ಉಪಕಾರ್ಯದರ್ಶಿ ಜಿ.ಧನರಾಜು ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 1 ಗಂಟೆಗಳ ಕಾಲ ಶ್ರಮದಾನ ಮಾಡಿ ಜನಸಾಮಾನ್ಯರಲ್ಲಿ ಮತ್ತು ಪ್ರವಾಸಿಗರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಗಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರೂ ಸಹ ಪ್ಲಾಸ್ಟಿಕ್ ಬಾಟಲಿ, ಮುಂತಾದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಈಗಾಗಲೇ ಇರಿಸಿರುವ ಕಸದಬುಟ್ಟಿಯಲ್ಲಿಯೇ ಹಾಕಬೇಕು ಎಂದು ತಿಳಿಸಿದರು.
ಮಡಿಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಅವರು ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಜನ ಜಾಗೃತಿ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಒಂದು ಗಂಟೆಗಳ ಕಾಲ ನಡೆದ ಶ್ರಮದಾನದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು.
ಕೆ.ನಿಡುಗಣೆ ಗ್ರಾ.ಪಂ.ನ ಅಧ್ಯಕ್ಷರಾದ ಪಾರ್ವತಿ ಮತ್ತು ಸದಸ್ಯರು, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್, ಗ್ರಾ.ಪಂ.ಪಿಡಿಒ ದಿನೇಶ್, ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯ ಜಿಲ್ಲಾ ಸಮಾಲೋಚಕರು ಹಾಗೂ ಗ್ರಾ,ಪಂ. ಸಿಬ್ಬಂದಿಗಳು ಇದ್ದರು.








