ಬೆಂಗಳೂರು ಅ.2 : ಗ್ರಾಮಗಳ ಉದ್ದಾರ ಮತ್ತು ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ ಎನ್ನುವ ಸರಳ ಮತ್ತು ವೈಜ್ಞಾನಿಕ ಆರ್ಥಿಕ ನೀತಿಯನ್ನು ನಮಗೆ ಕೊಟ್ಟವರು ಮಹಾತ್ಮಗಾಂಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ ಅವರ 154ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧಿ ಅವರ ಅಭಿವೃದ್ಧಿ ಮಾದರಿ ಇವತ್ತಿಗೂ ಶ್ರೇಷ್ಠವಾದದ್ದು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಘನತೆ ಮತ್ತು ಗೌರವದಿಂದ ಬಾಳಬೇಕು ಎನ್ನುವುದು ಅವರ ಗುರಿಯಾಗಿತ್ತು. ಹೀಗಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯಂತೆ ಅರೆ ಬೆತ್ತಲೆಯಾಗಿ ಉಡುಪು ಧರಿಸುತ್ತಿದ್ದರು. ನುಡಿದಂತೆ ನಡೆಯುವುದು ಗಾಂಧಿ ಅವರ ಬದುಕಾಗಿತ್ತು ಎಂದು ವಿವರಿಸಿದರು.
ಮಹಾತ್ಮಗಾಂಧಿ ಅಪರೂಪದ ಸಂತರಾಗಿದ್ದರು. ಇವರ ಅಹಿಂಸಾ ಮಾರ್ಗದ ಸ್ವಾತಂತ್ರ್ಯ ಚಳವಳಿ ಭಿನ್ನವಾದದ್ದು. ನೆಹರೂ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನ ಗಾಂಧಿಯವರು ದೆಹಲಿಯಲ್ಲಿ ಇರಲಿಲ್ಲ. ಕೋಲ್ಕತ್ತಾದಲ್ಲಿ ದೇಶ ವಿಭಜನೆಯಿಂದಾದ ಅನಾಹುತಗಳಲ್ಲಿ ನೊಂದವರ ಜನರ ಕಣ್ಣೀರು ಒರೆಸುತ್ತಿದ್ದರು ಎಂದು ಅವರ ಸರಳತೆ ಮತ್ತು ಸೌಹಾರ್ದದ ಬದುಕನ್ನು ವಿವರಿಸಿದರು.
ರವೀಂದ್ರನಾಥ ಠಾಗೂರರು ಗಾಂಧಿ ಅವರಿಗೆ ಮಹಾತ್ಮ ಎಂದು ಕರೆದರು. ಗಾಂಧಿ ಅವರ ಸತ್ಯ ಮಾರ್ಗದ ಬದುಕಿನ ಪ್ರತಿ ಹೆಜ್ಜೆಗಳು, ಅವರ ಸತ್ಯಾನ್ವೇಷಣೆ ಠಾಗೂರರು ಮಹಾತ್ಮ ಎಂದು ಕರೆಯಲು ಕಾರಣವಾಯಿತು ಎಂದು ಸ್ಮರಿಸಿದರು.
ಮಾಜಿ ಪ್ರಧಾನಿ ದಿ.ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಮಹಾತ್ಮಗಾಂಧಿಯವರ ಸರಳತೆ ಮತ್ತು ಆದರ್ಶಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡ ಅಪ್ಪಟ ಪ್ರಾಮಾಣಿಕ ನಾಯಕರಾಗಿದ್ದರು. ರೈಲು ಅಪಘಾತದ ಹೊಣೆ ಹೊತ್ತು ರಾಜೀನಾಮೆ ನೀಡಿದ ಆದರ್ಶ ನಾಯಕರಾಗಿದ್ದರು. ಹೀಗಾಗಿ ಗಾಂಧಿ ಮತ್ತು ಶಾಸ್ತ್ರಿ ಇಬ್ಬರೂ ನಮಗೆ ಆದರ್ಶಪ್ರಾಯರು ಎಂದು ಮೆಚ್ಚುಗೆ ಸೂಚಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.