ಮಡಿಕೇರಿ ಅ.5 : ಮಾಜಿ ಸೈನಿಕರಿಗೆ ನ್ಯಾಯಬದ್ಧವಾಗಿ ದೊರಕಬೇಕಾದ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುವ ಸಲುವಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಆಹ್ವಾನದ ಮೇರೆಗೆ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯು ಮಡಿಕೇರಿಯ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯ ಎಲ್ಲಾ ಮಾಜಿ ಸೈನಿಕರ ಸಂಘಗಳನ್ನು ಒಗ್ಗೂಡಿಸಿ, ಮಾಜಿ ಸೈನಿಕರ ಸಂಘಗಳ ಒಕ್ಕೂಟವನ್ನು ರಚಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮಾಜಿ ಸೈನಿಕರು ಮತ್ತು ಅವರ ಅವಲಂಬಿತ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಲು ಸಂಬಂಧಿಸಿದವರಿಗೆ ಒಂದು ತಿಂಗಳ ಕಾಲಾವಕಾಶ ನೀಡುವುದು. ಮುಂದಿನ ಒಂದು ತಿಂಗಳ ಒಳಗೆ ಬೇಡಿಕೆ ಈಡೇರದಿದ್ದಲ್ಲಿ ತಮ್ಮ ನ್ಯಾಯಯುತ ಹಕ್ಕುಗಳನ್ನು ಪಡೆಯಲು ಒಕ್ಕೂಟದ ಮೂಲಕ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಇದಕ್ಕೆ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರ ಸಂಘಗಳು ಸಹಮತ ವ್ಯಕ್ತಪಡಿಸಿದವು.
ಈ ಸಂದರ್ಭ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ಅವರು, ಸೈನಿಕರ ರಕ್ಷಣಾ ವಿಭಾಗ ಇಸಿಎಚ್‌ಎಸ್ ಮತ್ತು ಸಿಎಸ್‌ಡಿ ಕ್ಯಾಂಟೀನ್‌ಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭ ಮಾಜಿ ಸೈನಿಕರಿಗೆ ಅನ್ಯಾಯವಾಗುತ್ತಿದೆ ಇಸಿಎಚ್‌ಎಸ್ ಮತ್ತು ಸಿಎಸ್‌ಡಿಗಳಲ್ಲಿ ಮಾಜಿ ಸೈನಿಕರಿಗೆ ಶೇ.70 ರಷ್ಟು ಮೀಸಲಾತಿಯಿದೆ. ಆದರೆ, ಮಾಜಿ ಸೈನಿಕರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇತರರಿಗೆ ಹುದ್ದೆಯನ್ನು ನೀಡಲಾಗುತ್ತಿದ್ದು, ನಾಮಕಾವಸ್ಥೆಗೆ ಸಂದರ್ಶನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ನಿಟ್ಟಿನಲ್ಲಿ ತಮ್ಮ ನ್ಯಾಯಬದ್ದ ಹಕ್ಕುಗಳನ್ನು ಪಡೆಯಲು ಮಾಜಿ ಸೈನಿಕರ ಸಂಘಗಳ ಒಕ್ಕೂಟವನ್ನು ರಚಿಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಸರಿಪಡಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೇ, ನಾವು ಯಾರ ವಿರುದ್ಧವು ಇಲ್ಲ, ಸರ್ಕಾರದ ವಿರುದ್ಧವು ಇಲ್ಲ. ನಮಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯ ಕೇಳುತ್ತಿದ್ದೇವೆ ಎಂದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಸ್.ಸುಧೀರ್ ಮಾತನಾಡಿ, ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯ ಸುದಿನದಂದು ಜಿಲ್ಲೆಯ ಎಲ್ಲಾ ಮಾಜಿ ಸೈನಿಕರ ಸಂಘಗಳು ಒಗ್ಗೂಡಿ ಒಕ್ಕೂಟವನ್ನು ರಚಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಮಾಜಿ ಸೈನಿಕರಿಗೆ ದೊರಕಬೇಕಾದ ಹಕ್ಕುಗಳ ಬಗ್ಗೆ ಹೋರಾಟ ನಡೆಸುವ ಮೂಲಕ ಜಿಲ್ಲೆಯಲ್ಲಿ ಇದೊಂದು ನೂತನ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದರು.
ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐ.ಕೆ.ಮಂದಣ್ಣ ಮಾತನಾಡಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕರೆಯ ಮೇರೆಗೆ ನಾವಿಲ್ಲಿ ಸಭೆ ಸೇರಿದ್ದು, ಇಸಿಎಚ್‌ಎಸ್ ಮತ್ತು ಸಿಎಸ್‌ಡಿ ಕ್ಯಾಂಟೀನ್‌ನ ಗುಮಾಸ್ತ ಹುದ್ದೆ ಮತ್ತು ಇಸಿಎಚ್‌ಎಸ್‌ಲ್ಲಿ ಪರಿಚಾರಕ ಹುದ್ದೆಗಳ ಭರ್ತಿ ಮಾಡುವ ಸಂದರ್ಭ ಮಾಜಿ ಸೈನಿಕರಿಗೆ ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾಜಿ ಸೈನಿಕರ ಸಂಘಗಳ ಒಕ್ಕೂಟವನ್ನು ರಚಿಸುವ ಕುರಿತು ಕರಡು ನಿರ್ಣಯದ ಮೂಲಕ ಒಪ್ಪಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಕೊಡಗಿನ ಎಲ್ಲಾ ಮಾಜಿ ಸೈನಿಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.









