ನಾಪೋಕ್ಲು ಅ.5 : ಕಕ್ಕಬೆ – ಕುಂಜಿಲ ಗ್ರಾ.ಪಂ ಯ ಮರಂದೋಡು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಗ್ರಾಮದಲ್ಲಿ ಸಂಜೆ ಕತ್ತಲಾಗುತ್ತಿದ್ದಂತೆ ಮುಖ್ಯ ರಸ್ತೆ, ದಾರಿಗಳಲ್ಲಿ ತಿರುಗಾಡುವ ಕಾಡಾನೆಗಳಿಂದಗಿ ಗ್ರಾಮಸ್ಥರು ಮನೆಯಿಂದ ಹೊರಬರಲು ಜೀವ ಭಯ ಎದುರಾಗಿದೆ. ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆ, ಕಾಲೇಜು ಗೆ ತೆರಳುವಂತಾಗಿದೆ.
ಗ್ರಾಮದ ರೈತ ಅನ್ನಾಡಿಯಂಡ ಚಂಗಪ್ಪ ಅವರ ಗದ್ದೆ, ಚೋಯಮಾಡಂಡ ಪೂಣಚ್ಚ ಅವರ ಗದ್ದೆಯಲ್ಲಿ ಅಡ್ಡಾಡಿರುವ ಮೂರು ನಾಲ್ಕು ಕಾಡಾನೆಗಳು ಸುಮಾರು ಒಂದು ಏಕ್ರೆ ಭತ್ತದ ಪೈರುಗಳನ್ನು ತಿಂದು,ತುಳಿದು ನಾಶಪಡಿಸಿವೆ.
ಈ ವ್ಯಾಪ್ತಿಯಲ್ಲಿ ಸುಮಾರು 10ಕ್ಕಿಂತ ಹೆಚ್ಚು ಆನೆಗಳು ಬೀಡುಬಿಟ್ಟಿದ್ದು, ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ನಿರ್ಲಕ್ಷ ವಹಿಸುತ್ತಿದ್ದಾರೆ. ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಮರಂದೋಡ ಗ್ರಾ.ಪಂ ಸದಸ್ಯ ಚೋಯಮಾಡಂಡ ಹರೀಶ್ ಬೇಸರ ಪಡಿಸಿದ್ದಾರೆ.
ಕಾಡಾನೆ ಮತ್ತು ಮಾನವ ಸಂಘರ್ಷ ತಪ್ಪಿಸಲು ವ್ಯವಸ್ಥಿತ ಹೋರಾಟ ನಡೆಸಬೇಕಾಗಿದೆ ಎಂದರು. ಗ್ರಾಮದ ಅನ್ನಾಡಿಯಂಡ, ಮುಕ್ಕಾಟಿರ, ಚಂಡೀರ, ಬಾರಿಕೆರ ಸೇರಿದಂತೆ ವಿವಿಧ ಕುಟುಂಬಗಳ ರೈತರು ಕಷ್ಟಪಟ್ಟು ಬೆಳೆಸಿದ ಭತ್ತದ ಪೈರುಗಳು ಆನೆಗಳ ದಾಳಿಗೆ ತುತ್ತಾಗುವ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.
“ನಿರಂತರ ಕಾಡಾನೆ ದಾಳಿಯಿಂದಾಗಿ ಗದ್ದೆ ಪೈರು, ತೋಟಗಳ ಅಡಕೆ ತೆಂಗು ಸೇರಿದಂತೆ ಇತರ ಫಸಲು ಬರಿತ ಗಿಡ ಗಳನ್ನು ತಿಂದು ತುಳಿದು ನಮ್ಮ ಕೃಷಿ ಭೂಮಿ ಬರಡಾಗುತ್ತಿದೆ.
ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಆನೆಯಿಂದ ನಮಗಾದ ನಷ್ಟಕ್ಕೆ ಎಕ್ರೆಗೆ ಕನಿಷ್ಠ 25,000 ಪರಿಹಾರ ನೀಡಬೇಕೆಂದು ರೈತ ಚೋಯಮಾಡಂಡ ಪೂಣಚ್ಚ ಒತ್ತಾಯಿಸಿದ್ದಾರೆ.”
ವರದಿ : ದುಗ್ಗಳ ಸದಾನಂದ