ವಿರಾಜಪೇಟೆ ಅ.6 : ಕೊಡವರು ತಮ್ಮ ಆಚಾರ ವಿಚಾರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲೂ ರಾಜಕೀಯ ಬೆರೆಸಬಾರದು ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆ ಸಂಪಾದಕ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸ್ಥಾಪಕ ಅಧ್ಯಕ್ಷ ಡಾ.ಉಳ್ಳಿಯಡ ಪೂವಯ್ಯ ಹೇಳಿದರು.
ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ಕೈಲ್ ಪೋಳ್ಡ್ ಹಬ್ಬದ ಪ್ರಯುಕ್ತ ನಡೆದ ಒತ್ತೊರ್ಮೆ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೊಡವಾಮೆ ಬಗ್ಗೆ, ಕೊಡವ ಜನಾಂಗದ ಬಗ್ಗೆ, ಸಂಸ್ಕೃತಿ, ಆಚಾರ, ವಿಚಾರ ಪದ್ಧತಿ ಪರಂಪರೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರಲ್ಲದೆ ಕೊಡವರ ಜನಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕೊಡವರು ಸ್ವಾಭಿಮಾನಿಗಳು, ಸರ್ಕಾರದ ಯಾವುದೇ ಮೀಸಲಾತಿ, ಸವಲತ್ತುಗಳು ಸಿಗಬೇಕಾದರೂ ಕೂಡ ಎಲ್ಲಾರು ರಾಜಕೀಯ ರಹಿತವಾಗಿ ಹೋರಾಟ ಮಾಡಬೇಕು. ಹಾಗೂ ಬದುಕಿನ ಪ್ರತಿ ಹೆಜ್ಜೆಯಲ್ಲೂ ಕೊಡವತನವನ್ನು ಮರೆಯಬಾರದು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಗ್ರೀನ್ ಸಿಟಿ ಪೋರಮ್ ಅಧ್ಯಕ್ಷ, ಸಮಾಜ ಸೇವಕ ಚೆಯ್ಯಂಡ ಸತ್ಯ ಮಾತನಾಡಿ, ಕೊಡವ ಆಚಾರ ವಿಚಾರ, ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಬಹುಮುಖ್ಯ ಎಂದು ಹೇಳಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರದ ಪಾಠವನ್ನು ಮನೆಯಲ್ಲಿ ತಾಯಿ ಕಲಿಸಿ ಕೊಡಬೇಕು ಎಂಬ ಕಿವಿಮಾತನ್ನು ಕೂಡ ಹೇಳಿದರು.
ನೀಲಕ್ಕ ಗ್ರೂಪ್‍ನ ನಾಯಕಿ ಮಾಳೇಟ್ಟಿರ ಕವಿತ ಶ್ರೀನಿವಾಸ್ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನ ಸಂಭ್ರಮದ ಕೈಲ್ ಪೊಳ್ದ್ ಹಬ್ಬ ಪ್ರಾಚೀನ ಕಾಲದಿಂದಲೂ ನಡೆಯುತ್ತಾ ಬಂದಿದೆ. ರಾಜರ ಕಾಲದಲ್ಲಿ ರಕ್ಷಣೆಯ ವ್ಯವಸ್ಥೆಯ ದೃಷ್ಟಿಯಿಂದ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ದಿನ ಹಬ್ಬದ ಕಾರ್ಯಕ್ರಮ ಇರುತ್ತಿದ್ದವು. ಅದು ಈಗಲು ಸಾಂಪ್ರದಾಯಕವಾಗಿ ಮುಂದುವರಿದಿದೆ. ನಮ್ಮ ಜೀವನ ಕ್ರಮ, ಬೇಟೆಯಾಡುವುದು ಹಾಗೂ ಗೆಡ್ಡೆ, ಗೆಣಸುಗಳನ್ನು ಕಾಡಿನಲ್ಲಿ ಸಂಗ್ರಹಿಸುವುದು. ಭತ್ತದ ಕೃಷಿ ಮಾಡುವುದು ಜೀವನ ಪದ್ಧತಿಯಾಗಿ ಬೆಳೆದು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾಗರಿಕತೆಯ ಪ್ರಭಾವ ನಮ್ಮ ಸಂಪ್ರದಾಯಗಳ ಮೇಲೆ ಬೀರಿ ಅಂದಿನ ಸಂಭ್ರಮ ಇಂದು ಕೇವಲ ಸಾಂಕೇತಿಕತೆಗೆ ಸೀಮಿತವಾಗಿದೆ ಎಂದರು.
ಕೈಲ್ ಮುಹೂರ್ತದ ಒಂದು ಭಾಗವಾಗಿ ಊರಿನ ಎಲ್ಲರು ಒಂದೆಡೆ ‘ಮಂದ್’ ನಲ್ಲಿ ಸೇರುವುದು. ಅಲ್ಲಿ, ಅನೇಕ ಆಟೋಟ ಸ್ಪರ್ಧೆಗಳಲ್ಲಿ ಹೆಂಗಸರು, ಗಂಡಸರು, ಮಕ್ಕಳು ಪಾಲ್ಗೊಳ್ಳುವುದು ಈಗಲೂ ವಿರಳವಾಗಿಯಾದರು ಕಾಣಬಹುದಾಗಿದೆ ಎಂದು ಹಬ್ಬದ ಮಾಹಿತಿ ನೀಡಿದರಲ್ಲದೆ ಪೊಮ್ಮಕ್ಕಡ ಒಕ್ಕೂಟ ನಡೆದು ಬಂದ ಹಾದಿ ಹಾಗೂ ಒಕ್ಕೂಟದ ಉದ್ದೇಶವನ್ನು ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲ್ಲಪಂಡ ತಾರ ತಪ್ಪಡಕ ಕಟ್ಟುವುದರ ಮೂಲಕ ಚಾಲನೆ ನೀಡಿದರು.
ಒತ್ತೊರ್ಮೆ ಕೂಟದ ಅಂಗವಾಗಿ ನಡೆದ ಕ್ರೀಡಾ ಪೈಪೋಟಿಯನ್ನು ಹಿರಿಯ ಸದಸ್ಯೆ ನಾಯಡ ಪಾಲಿ ಉದ್ಘಾಟಿಸಿದರು. ಇದೇ ಸಂದರ್ಭ ಅತಿಥಿ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮಾಳೇಟ್ಟಿರ ಕವಿತಾ ಶ್ರೀನಿವಾಸ್ ಅವರ ಮುಂದಾಳುತನದಲ್ಲಿ ನೀಲಕ್ಕ ಗ್ರೂಪ್ ಸದಸ್ಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ಮನರಂಜಿಸಿತು.
ಕ್ರೀಡಾ ಪೈಪೋಟಿಯಲ್ಲಿ ಗೆದ್ದವರಿಗೆ ಅತಿಥಿ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯ ಮಹಿಳೆಯರಿಗೆ ಹಲವು ತರಹದ ಕ್ರೀಡಾ ಪೈಪೋಟಿ, ಕೊಡವ ವಾಲಗತಾಟ್ ಪೈಪೋಟಿ ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ, ನಾಯಕಂಡ ಬೇಬಿ ಚಿಣ್ಣಪ್ಪ, ಖಜಾಂಚಿ ತಾತಂಡ ಯಶು ಕಬೀರ್ ಹಾಜರಿದ್ದರು.
ಬಾಳೆಯಡ ಶೈಲಾ ಪ್ರಾರ್ಥಸಿದರು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಸ್ವಾಗತಿಸಿದರು. ಕೊಡಗಿನ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.









