ಮಡಿಕೇರಿ ಅ.6 : ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ, ಎಲ್ಲಿ ನೋಡಿದರೂ ಕಾಂಗ್ರೆಸ್ ಕಾರ್ಯಕರ್ತರೇ ಕಾಣಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಮೇಲೆ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಮಯವಾಗಿವೆ. ಇತ್ತೀಚೆಗೆ ಸಂಪಾಜೆಯಲ್ಲಿ ನಡೆದ ಕಾಂಗ್ರೆಸ್ ಸಭೆಗೆ ತಹಶೀಲ್ದಾರ್ ರನ್ನು ಕರೆಸಿ ಕುಂದುಕೊರತೆ ಸಭೆ ಎಂದು ಪ್ರತಿಬಿಂಬಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿಗೆ ದೂರವಾಣಿ ಮಾಡಿದಾಗ ಕಾಂಗ್ರೆಸ್ ಅಧ್ಯಕ್ಷರ ಕೈಗೆ ಫೋನ್ ಕೊಟ್ಟ ಪ್ರಸಂಗವೂ ನಡೆದಿದೆ. ಸರ್ಕಾರಿ ಕಚೇರಿಗಳಲ್ಲಿ ಅರ್ಜಿದಾರರ ಬದಲು ಕಾಂಗ್ರೆಸ್ ಕಾರ್ಯಕರ್ತರೇ ತುಂಬಿರುತ್ತಾರೆ ಎಂದು ಟೀಕಿಸಿದರು.
ಹಿಂದಿನ ಶಾಸಕರುಗಳು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈಗಿನ ಶಾಸಕರುಗಳು ತಾವು ಮಾಡಿದ ಪ್ರತಿಯೊಂದು ಕೆಲಸಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಾವು ಮಾಡಿದ ಕೆಲಸ ಜನಪರವಾಗಿರಬೇಕೆ ಹೊರತು ಪ್ರಚಾರದ ಮೂಲಕ ಸಮಾಜದ ದಾರಿ ತಪ್ಪಿಸುವ ಕೆಲಸ ಆಗಬಾರದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳ ಮನೆಗೆ ಶಾಸಕರು ಭೇಟಿ ನೀಡದೆ ಕಾಂಗ್ರೆಸ್ ಕಾರ್ಯಕರ್ತರನ್ನು ಕಳುಹಿಸಿ ಶಾಸಕರ ಆದೇಶದ ಮೇರೆಗೆ ಭೇಟಿ ನೀಡಲಾಗಿದೆ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ಚೆಕ್ ವಿತರಣೆ ಮಾಡುವ ಸಂದರ್ಭ ಮಾತ್ರ ಸಚಿವರು, ಶಾಸಕರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ಕಾರ್ಯವೈಖರಿ ಎಂದು ಸುಬ್ರಮಣ್ಯ ಉಪಾಧ್ಯಾಯ ಪ್ರಶ್ನಿಸಿದರು.
ಜಮ್ಮಾಬಾಣೆ ಸಮಸ್ಯೆಯನ್ನು 2008ರಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರ ಬಗೆಹರಿಸಿದೆ. ಆದರೆ ಈಗಿನ ಶಾಸಕರು ನಾನು ಮಾಡಿದೆ ಎಂದು ಹೇಳಿಕೆ ನೀಡುತ್ತಿರುವುದು ವಿಪರ್ಯಾಸ. ತಾಳತ್ತಮನೆ, ಮೇಕೇರಿ, ಬೆಟ್ಟಗೇರಿ, ಅರ್ವತ್ತೊಕ್ಲು ರಸ್ತೆ 2020ರಲ್ಲೇ ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಆದರೆ ಕಾಂಗ್ರೆಸ್ಸಿಗರು ಈಗಿನ ಶಾಸಕರು ಮೇಲ್ದರ್ಜೆಗೇರಿಸಲು ಆದೇಶಿಸಿದ್ದಾರೆ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ. 2023-24ರ ಮುಂಗಡ ಪತ್ರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ. ಘೋಷಣೆ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೊಮ್ಮಾಯಿ ಅವರ ಬಜೆಟನ್ನು ತಿರಸ್ಕರಿಸಿ ಹೊಸ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಕೊಡಗು ಜಿಲ್ಲೆಯ ಪ್ಯಾಕೇಜ್ ಮತ್ತು ಕಾಲು ಸೇತುವೆಗಳನ್ನು ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬಿಜೆಪಿ ಸರ್ಕಾರ ಬಜೆಟ್‍ನಲ್ಲಿ ರೈಲ್ವೆ ಕಂಬಿ ಅಳವಡಿಸಲು ಮೀಸಲಿಟ್ಟ ರೂ.150 ಕೋಟಿಯನ್ನು ಕಾಂಗ್ರೆಸ್ ಸರ್ಕಾರ 120 ಕೋಟಿಗೆ ಇಳಿಸಿದ್ದು, ಇಲ್ಲಿಯವರೆಗೆ ಅರಣ್ಯ ಇಲಾಖೆಗೆ ಹಣ ಬಿಡುಗಡೆ ಮಾಡಿಲ್ಲ. ಬಿಟ್ಟಿ ಭಾಗ್ಯಗಳನ್ನು ನೀಡುವುದನ್ನು ಮೊದಲು ನಿಲ್ಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಆದ್ಯತೆ ನೀಡಲಿ ಎಂದು ಸುಬ್ರಮಣ್ಯ ಉಪಾಧ್ಯಾಯ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೊಡಗಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದರ್ಪ ಮಿತಿಮೀರಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾರ್ಯಕರ್ತರು ಶಾಸಕರ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸುತ್ತಿದ್ದು, ಬ್ರೋಕರ್‍ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ನಡೆದ ದಸರಾ ದಶಮಂಟಪ ಸಭೆಗೆ ಆಗಮಿಸಿದ ಶಾಸಕರು, ದಸರಾ ಸಮಿತಿ ಮತ್ತು ಯಾವುದೇ ದೇವಾಲಯ ಸಮಿತಿಯಲ್ಲಿ ಗುರುತಿಸಿಕೊಂಡಿಲ್ಲದ ಕಾಂಗ್ರೆಸ್ ವ್ಯಕ್ತಿಯೊಬ್ಬರನ್ನು ವೇದಿಕೆಯಲ್ಲಿ ಕೂರಿಸಿ ಕಾಂಗ್ರೆಸ್ ಸಮಿತಿ ಸಭೆಯಂತೆ ಮಾಡಲು ಹೊರಟ್ಟಿದ್ದರು. ದಸರಾ ಸಭೆಗೆ ತನ್ನದೇ ಆದ ಗೌರವ ಇದ್ದು, ಅದನ್ನು ಈ ಹಿಂದಿನಿಂದಲೂ ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎ.ಅರುಣ್ ಕುಮಾರ್ ಹಾಗೂ ನಗರಾಧ್ಯಕ್ಷ ವಿ.ಆರ್.ಮನು ಮಂಜುನಾಥ್ ಉಪಸ್ಥಿತರಿದ್ದರು.









