ನಾಪೋಕ್ಲು ಅ.6 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕಾವೇರಿ ನದಿ ಮಲೀನ ವಾಗುತ್ತಿದ್ದು, ಕಾವೇರಿ ನದಿ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಗ್ರಾ.ಪಂ ಮುಂದಾಗಿದೆ ಎಂದು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ ಹೇಳಿದರು.
ಹೊದ್ದೂರು ಗ್ರಾ.ಪಂ ಮುಂದಾಳತ್ವದಲ್ಲಿ ಧರ್ಮಸ್ಥಳ ಹಾಗೂ ಸಂಜೀವಿನಿ ಒಕ್ಕೂಟ, ವಿವಿಧ ಸಂಘಗಳ ಸಹಾಯ ಯೋಗದೊಂದಿಗೆ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೊದ್ದೂರು ಗ್ರಾಮದ ರಸ್ತೆಯಂಚಿನಲ್ಲಿ ಹರಿಯುವ ಕಾವೇರಿ ನದಿ ಮಲಿನವಾಗುತ್ತಿದ್ದು, ಪ್ರವಾಸಿಗರು,ಜನರು ಕಸ ತ್ಯಾಜ್ಯಗಳನ್ನು ಕಾವೇರಿ ನದಿ ತಟದಲ್ಲಿ ಸುರಿಯುತ್ತಿದ್ದಾರೆ. ಈ ಹಿಂದೆ ಕಾವೇರಿ ಹೊಳೆ, ರಸ್ತೆಯ ಎರಡು ಬದಿ ಸುಂದರವಾಗಿ ಕಾಣುತ್ತಿತ್ತು. ಆದರೆ ತ್ಯಾಜ್ಯಗಳು ತುಂಬಿ ಮಲೀನವಾಗಿದೆ. ಇಂತಹ ನದಿಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ರಾಜ್ಯದಲ್ಲಿ ಕಾವೇರಿ ನದಿ ನೀರನ್ನು ಸಹಸ್ರಾರು ಮಂದಿ ಕುಡಿಯುತ್ತಿದ್ದು, ಜನರು ಕಸ ತ್ಯಾಜ್ಯವನ್ನು ಎಸೆಯುವುದರಿಂದ ನೀರು ಮಲೀನವಾಗುತ್ತಿದೆ. ಇದೀಗ ಕಾವೇರಿ ಸಂಕ್ರಮಣ, ದಸರಾ ಹಬ್ಬಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ನದಿಗಳನ್ನು ಸ್ವಚ್ಛವಾಗಿಡುವುದು ಎಲ್ಲರ ಜವಾಬ್ದಾರಿ ಎಂದ ಅವರು, ನದಿಗಳಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ಪಂಚಾಯಿತಿ ಸಿಇಓ ಶೇಖರ್ ಮಾತನಾಡಿ, ಸ್ವಚ್ಛತಾ ಸೇವಾ ಯೋಜನೆಯಡಿ ಕನ್ನಡ ನಾಡಿನ ಜೀವನದಿ ಕಾವೇರಿಯ ಸಂರಕ್ಷಣೆ ಮಾಡುವಂತಹ ಉದ್ದೇಶವನ್ನು ಹೊಂದಿದೆ. ಪ್ರಜ್ಞಾವಂತ ನಾಗರಿಕರು ಕಾವೇರಿ ನದಿ ಮಲೀನವಾಗದಂತೆ ನೋಡಿಕೊಳ್ಳಬೇಕು. ನದಿ ಮೂಲದಲ್ಲಿ ತ್ಯಾಜ್ಯ ಎಸೆಯಬಾರದು. ಸ್ವಚ್ಛ ಪರಿಸರವನ್ನು ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಹೋದವಾಡ ಗ್ರಾಮದ ಕಾವೇರಿ ನದೀ ತೀರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಾಪೋಕ್ಲು ಕೊಟ್ಟಮುಡಿ ಸೇತುವೆಯಿಂದ ಹೊದ್ದೂರು ಗ್ರಾಮ ಪಂಚಾಯಿತಿವರೆಗೆ ಕಾವೇರಿ ನದಿಯ ಪರಿಸರ ಹಾಗೂ ರಸ್ತೆಯುದ್ಧಕ್ಕೂ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಅನುರಾಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೊಣ್ಣಪ್ಪ, ಗ್ರಾ.ಪಂ ಸದಸ್ಯರಾದ ವಾಂಚಿರ ಅಜಯ್ ಕುಮಾರ್, ಸರಸು, ಕುಸುಮಾವತಿ, ಚೌರೀರ ಅನಿತಾ, ಚೌರೀರ ನವೀನ್, ಕೆ.ಆರ್.ಅನಿತಾ, ಮೈದು ಕೊಟ್ಟಮುಡಿ, ಪಾರ್ವತಿ, ಲಕ್ಷ್ಮಿ, ಕಡ್ಲೆರ ಟೈನಿ, ಪಿಡಿಒ ಅಬ್ದುಲ್ಲಾ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಪಾಟೀಲ್ ಹಾಗೂ ಗ್ರಾಮದ ಮಹಿಳಾ ಒಕ್ಕೂಟ ಹಾಗೂ ಯುವಕ ಸಾಂಘಗಳ ಪದಾಧಿಕಾರಿ, ಪ್ರತಿನಿಧಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.










