ನಾಪೋಕ್ಲು ಅ.11 : ಸೂಕ್ತ ಸಮಯದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದೇ ಹೋದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತೇವೆ ಎಂದು ಕಾಟಕೇರಿಯ ಹರ್ ಮಂದಿರ್ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಹೇಳಿದರು.
ಕಾಟಕೇರಿಯ ಹರ್ ಮಂದಿರ್ ಶಾಲೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಉತ್ತಮ ಸಮಾಜ ನಿರ್ಮಾಣದ ಶಿಲ್ಪಿಗಳು. ಹಾಗಾಗಿ ಮಕ್ಕಳು ಆರೋಗ್ಯದ ಮಹತ್ವವನ್ನು ತಿಳಿದುಕೊಂಡು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕ ಎಂದರು.
ಜಾಗತಿಕ ಮಟ್ಟದಲ್ಲಿ ಪ್ರತಿ ಆರರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ. ನಾವು ನಮ್ಮ ಮನಸ್ಸನ್ನು ಧನಾತ್ಮಕವಾಗಿ ಇಟ್ಟುಕೊಳ್ಳಬೇಕು .ಇದಕ್ಕಾಗಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ, ಧನಾತ್ಮಕ ಮಾತುಗಳು ಹಾಗೂ ಉತ್ತಮ ಹವ್ಯಾಸಗಳು ನಮ್ಮನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುತ್ತವೆ ಎಂದರು.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ ಮಕ್ಕಳಲ್ಲಿ ದೈಹಿಕ ತೊಂದರೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳಬೇಕು. ಮಾನಸಿಕ ಸಮಸ್ಯೆಗಳಾದ ಭಯ, ಜಿಗುಪ್ಸೆ, ನಿರುತ್ಸಾಹ ಮುಂತಾದ ಋಣಾತ್ಮಕ ಭಾವನೆಗಳನ್ನು ದೂರ ಮಾಡಬೇಕು. ಪ್ರತಿ ಮನುಷ್ಯನನ್ನು ಭಾವನೆಗಳು ಇರುತ್ತವೆ. ಪ್ರಮುಖವಾಗಿ ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಭಾವನೆಗಳು ಧನಾತ್ಮಕವಾಗಿರಬೇಕು. ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹರ್ ಮಂದಿರ್ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ