ಮಡಿಕೇರಿ ಅ.11 : ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯ ಮೈಸೂರು ವಿಭಾಗದಲ್ಲಿ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾಗಿದೆ.
ಮೈಸೂರು ತಂಡದ ಸಿ.ಎಂ.ತ್ವಿಶ ದೇಚಮ್ಮ ಉತ್ತಮ ಗೋಲ್ ಕೀಪರ್ ಆಗಿ ಆಟ ಪ್ರದರ್ಶಿಸಿದರು.
ಅಂತಿಮ ಟೂರ್ನಿಯಲ್ಲಿ ತೀವ್ರ ಸೆಣಸಾಟ ನಡೆಸಿದ ಉಭಯ ತಂಡಗಳು ಸಮಬಲ ಪ್ರದರ್ಶಿಸಿದವು. ಟೂರ್ನಿಯಲ್ಲಿ
ಹೆಚ್ಚು ಗೋಲು ಗಳಿಸಿದ ಮೈಸೂರು ವಿಭಾಗದ ತಂಡವು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡಿತು. ಕೂಡಿಗೆ ಕ್ರೀಡಾಶಾಲಾ ತಂಡವು ದ್ವಿತೀಯ ಸ್ಥಾನ ಗಳಿಸಿತು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡ ತಂಡಗಳಿಗೆ ಟ್ರೋಫಿ ವಿತರಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್ ಪಲ್ಲೇದ್, ಕ್ರೀಡಾಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ದೇವಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಟಿ.ಪೂರ್ಣೇಶ್ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ ಇತರರು ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಇ.ನಂದ, ಸುರೇಶ್ ಕುಮಾರ್, ಡ್ಯಾನಿ ಈರಪ್ಪ, ಡ್ಯಾನಿ ನಾಣಯ್ಯ, ಗಣೇಶ್ ಕುಮಾರ್, ತಮ್ಮಯ್ಯ, ರಮಾನಂದ, ಅರುಣ್ ಕುಮಾರ್ , ಬೋಪಣ್ಣ ಕಕ್ಕಬ್ಬೆ, ರತೀಶ್, ಮಹೇಂದ್ರ, ಬೋಪಣ್ಣ ಶೆಟ್ಟಿಗೇರಿ ಇತರರು ರೆಫರಿಯಾಗಿ ಕಾರ್ಯ ನಿರ್ವಹಿಸಿದರು.
ವಿಜೇತ ತಂಡಗಳು ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಯಲ್ಲಿ ಭಾಗವಹಿಸಲಿವೆ.
ಪಂದ್ಯಾವಳಿಯಲ್ಲಿ ನಾಲ್ಕು ವಿಭಾಗಗಳಾದ ಕಲಬುರ್ಗಿ, ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗಗಳ ತಂಡಗಳು ಪಾಲ್ಗೊಂಡಿದ್ದವು.