ಮಡಿಕೇರಿ ಅ.11 : ಮಳೆಯ ಅಭಾವದಿಂದ ಕಾವೇರಿ ನೀರು ಹಂಚಿಕೆಯ ವಿವಾದ ಉದ್ಭವವಾದ ಯಾವುದೇ ಸಂದರ್ಭಗಳಲ್ಲಿ ಸರ್ಕಾರಗಳಾಗಲಿ, ರಾಜಕೀಯ ಪಕ್ಷಗಳಾಗಲಿ ಅದರ ಬಗೆಹರಿಕೆಗೆ ಆಸಕ್ತಿಯನ್ನೇ ತೋರಿಲ್ಲ. ಈ ಹಿನ್ನೆಲೆ ಕಾವೇರಿ ನದಿ ನೀರಿನ ಹಂಚಿಕೆಗೆ ಕನ್ನಡಿಗರೆಲ್ಲರ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ‘ಕಾವೇರಿ ತಾಯಿ…ಕಾಪಾಡು ತಾಯಿ’ ಯಾತ್ರೆಯನ್ನು ಕದಂಬ ಸೈನ್ಯ ಹಮ್ಮಿಕೊಂಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ತಮಿಳುನಾಡಿನಲ್ಲಿ ಕಾವೇರಿಯ ವಿಚಾರ ಎದುರಾದ ಸಂದರ್ಭಗಳಲ್ಲೆಲ್ಲ ಅಲ್ಲಿನ ಜನತೆ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಆದರೆ, ಕರ್ನಾಟಕದಲ್ಲಿ ಅದು ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಕಾವೇರಿ, ಕೃಷ್ಣ, ಮಹದಾಯಿ ಪ್ರತಿಯೊಬ್ಬ ಕನ್ನಡಿಗರ ಹೃದಯ ಬಡಿತವಾಗಬೇಕೆಂದು ಆಶಿಸಿದರು.
ಮಳೆಯಿಲ್ಲದೆ ಕಾವೇರಿಯಲ್ಲಿ ನಮ್ಮ ಬಳಕೆಗೆ ಅಗತ್ಯ ನೀರಿಲ್ಲ ಎನ್ನುವುದನ್ನು ಕೇಂದ್ರಕ್ಕೆ ತಿಳಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿದ್ದರೆ, ವಿರೋಧ ಪಕ್ಷಗಳಿಂದ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನಗಳು ನಡೆಯುತ್ತಿಲ್ಲವೆಂದು ತೀವ್ರ ಬೇಸರ ವ್ಯಕ್ತಪಡಿಸಿ, ಎಲ್ಲಾ ಸರ್ಕಾರಗಳು ರಾಜಕೀಯ ಪಕ್ಷಗಳು ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತವನ್ನು ಬಲಿಕೊಡುತ್ತಿರುವುದಾಗಿ ಆಕ್ರೋಶ ಹೊರ ಹಾಕಿದರು.
::: ಸೂತ್ರಕ್ಕೆ ಆಗ್ರಹ :::
ಮಳೆಯ ಕೊರತೆಯ ಸಂದರ್ಭ ಕರ್ನಾಟಕ ಮತ್ತು ತಮಿಳುನಾಡು ನಡುವೆ ನೀರು ಹಂಚಿಕೆ ಹೇಗೆ ಎನ್ನುವ ಬಗ್ಗೆ ‘ಕಾವೇರಿ ಸಂಕಷ್ಟ ಸೂತ್ರವನ್ನು’ ರಚಿಸಬೇಕೆಂದು ಬೇಕ್ರಿ ರಮೇಶ್ ಇದೇ ಸಂದರ್ಭ ಆಗ್ರಹಿಸಿದರು.
ಪ್ರಸ್ತುತ ಕಾವೇರಿ, ಕೃಷ್ಣ, ಮಹದಾಯಿ ಹೀಗೆ ಎಲ್ಲವೂ ರಾಜಕೀಯ ಕಾರಣಗಳಿಗೆ ಬಳಕೆಯಾಗುತ್ತಿದೆಯೆಂದು ತೀಕ್ಷ್ಣವಾಗಿ ನುಡಿದ ಅವರು, ರಾಜ್ಯದ 224 ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ರಾಜ್ಯದ ರೈತರ ಸಂಕಷ್ಟಗಳಿಗೆ ಕಿಂಚಿತ್ ಕಾಳಜಿ ತೋರಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಈ ಹಿಂದೆ ಹಿರಿಯರಾದ, ರೈತ ಹೋರಾಟಗಾರರಾದ ಮಾದೇಗೌಡರ ಮಾತಿಗೆ ಸರ್ಕಾರಗಳು, ಪಕ್ಷಗಳು ಗಮನ ಹರಿಸುತ್ತಿದ್ದವು. ಇಂದು ನಮಗೆ ನಾಯಕರೆ ಇಲ್ಲದಂತಹ ಪರಿಸ್ಥಿತಿ ಇದೆ. ನೀವು ಹೋರಾಟ ಬೇಕಾದರೆ ಮಾಡಿಕೊಳ್ಳಿ ಎನ್ನುವ ದಾಷ್ಟ್ಯದಿಂದ ತಮಿಳುನಾಡಿಗೆ ಪ್ರತಿನಿತ್ಯ ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲು 5600 ಕ್ಯೂಸೆಕ್ ನೀರು ಹರಿಸಲಾಗುತ್ತಿದೆಯೆಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ. ದೇವನಹಳ್ಳಿ ದೇವರಾಜ್ ಮಾತನಾಡಿ, ಕಾವೇರಿ ಸಂಕಷ್ಟ ಬಗೆಹರಿಕೆಗೆ ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವುದು ಅತ್ಯವಶ್ಯವೆಂದು ಅಭಿಪ್ರಾಯಪಟ್ಟರು.
ಕದಂಬ ಸೈನ್ಯದ ಮಂಡ್ಯ, ಬೆಂಗಳೂರು, ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳ ಪ್ರಮುಖರು ಕಾವೇರಿ ಸಂಕಷ್ಟ ನಿವಾರಣೆಗೆ ರಾಜ್ಯದ ಜನರ ಒಕ್ಕೊರಲಿನ ಬೆಂಬಲವನ್ನು ಕೋರಿ ಮಂಡ್ಯದಿಂದ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆ ಮೈಸೂರು ಮೂಲಕ ಕೊಡಗಿನ ಗೋಣಿಕೊಪ್ಪ, ಸಿದ್ದಾಪುರ, ಅಮ್ಮತ್ತಿ, ಮಡಿಕೇರಿ ಮೂಲಕ ಭಾಗಮಂಡಲ ಮತ್ತು ತಲಕಾವೇರಿಗೆ ತೆರಳಲಿದೆ. ಅಲ್ಲಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕಷ್ಟ ಪರಿಹಾರಕ್ಕೆ ಪ್ರಾರ್ಥನೆ ಸಲ್ಲಿಸಲಾಗುತ್ತದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಎಸ್. ಶಿವ ಕುಮಾರ್, ರಾಮನಗರ ಜಿಲ್ಲಾ ಅಧ್ಯಕ್ಷ ಶಿವ ಕುಮಾರ್ ಪಟ್ಲಿ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಜೋಸೆಫ್ ರಾಮು ಹಾಗೂ ಮೈಸೂರು ಮಹದೇವಸ್ವಾಮಿ ಉಪಸ್ಥಿತರಿದ್ದರು.
Breaking News
- *ಭಾಗಮಂಡಲ ಫ್ಲೈ ಓವರ್ – ಫ್ಲಾಶ್ ಬ್ಯಾಕ್*
- *ಅರ್ಚಕರ ಮೇಲೆ ನಡೆದ ಹಲ್ಲೆ ಪ್ರಕರಣ : ಸಹಕರಿಸಿದ ಆರೋಪಿಗಳು ಹಾಗೂ ವಾಹನಗಳು ವಶ : ಆರೋಪಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಮಾಹಿತಿ ಒದಗಿಸಲು ಎಸ್ಪಿ ಮನವಿ*
- *ಮುಖ್ಯಮಂತ್ರಿಗಳಿಗೆ ಕೊಡಗು ಎಸ್ಡಿಪಿಐಯಿಂದ ಪಂಚ ಪ್ರಶ್ನೆ*
- *ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ನೀಡಿದ ಎನ್.ಯು.ನಾಚಪ್ಪ*
- *ಮಡಿಕೇರಿಯಲ್ಲಿ ಹುತಾತ್ಮ ದಿನಾಚರಣೆ : ಗಾಂಧೀಜಿ ತತ್ವ, ಆದರ್ಶ ಮೈಗೂಡಿಸಿಕೊಳ್ಳಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ*
- *ಕೊಡಗು : ಫೆ.13 ರವರೆಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ”*
- *ಒಳಮೀಸಲಾತಿ ಶೀಘ್ರ ಜಾರಿಗೆ ತರಲು ದಲಿತ ಸಂಘರ್ಷ ಸಮಿತಿ ಆಗ್ರಹ*
- *ಮೂರ್ನಾಡು ಗಜಾನನ ಯುವಕ ಸಂಘ ಖಂಡನೆ*
- *ಅಮಾಯಕರ ಮೇಲಿನ ಹಲ್ಲೆ ಖಂಡನೀಯ : ಮೂರ್ನಾಡು ಆಪ್ತಮಿತ್ರ ಬಳಗ ಅಸಮಾಧಾನ*
- *ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ಪುತ್ತರಿ ಒತ್ತೋರ್ಮೆ ಕೂಟ*