ಕೂಡಿಗೆ ಅ.11: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಉತ್ತರ ಕೊಡಗಿನ ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಶಾಲಾ ಮಕ್ಕಳ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗೆ ವರ್ಣ ರಂಜಿತ ತೆರೆಬಿತ್ತು.
ಸುತ್ತಲೂ ಹಸಿರು ಪರಿಸರದಿಂದ ಕಂಗೊಳಿಸುತ್ತಿದ್ದ ಹಾಕಿ ಟರ್ಫ್ ಮೈದಾನದಲ್ಲಿ ರಾಜ್ಯಮಟ್ಟದ ಟೂರ್ನಿಯಿಂದ ರಾಷ್ಟ್ರೀಯ ಟೂರ್ನಿಗೆ ಆಯ್ಕೆಗೊಂಡ ಕ್ರೀಡಾಳುಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಹಾಕಿಯ ತವರಾದ ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಕ್ರೀಡಾಭಿಮಾನಿಗಳು
ನೀಡುತ್ತಿರುವ ಪ್ರೋತ್ಸಾಹ ಅನನ್ಯವಾದುದು.
ಕೊಡಗಿನಲ್ಲಿ ಕಲೆ, ಸಾಂಸ್ಕೃತಿಕ ಪರಂಪರೆಯೊಂದಿಗೆ ಹಾಕಿ ಕ್ರೀಡೆ ಕೂಡ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ರಾಷ್ಟ್ರೀಯ 17 ವಯೋಮಾನದ ಬಾಲಕಿಯರ ಹಾಕಿ ಟೂರ್ನಿಯ ಯಶಸ್ವಿ ಸಂಘಟನೆಗೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದು ಡಾ ಸದಾಶಿವಯ್ಯ ಪಲ್ಲೇದ್ ಹೇಳಿದರು.
ಮೂರು ದಿನಗಳ ಕಾಲ ಹಾಕಿ ಟೂರ್ನಿ ಯಶಸ್ವಿಯಾಗಿ ನಡೆಯಲು ಸಹಕರಿಸಿದವರಿಗೆಲ್ಲ ಡಾ.ಸದಾಶಿವಯ್ಯ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ರೀಡಾಶಾಲೆಯ ಮುಖ್ಯ ಶಿಕ್ಷಕ ಬಿ.ಟಿ.ದೇವಕುಮಾರ್ ಮಾತನಾಡಿ, ಕೊಡಗಿನಲ್ಲಿ ಹಾಕಿ ಕ್ರೀಡೆ ಸೇರಿದಂತೆ ಎಲ್ಲಾ ಕ್ರೀಡೆಗಳಿಗೂ ನಿರಂತರವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಸ್ಪೂರ್ತಿ ಬೆಳೆಸಿಕೊಳ್ಳುವುದು ಮುಖ್ಯ ಎಂದರು.
ಟೂರ್ನಿಯಲ್ಲಿ ವಿಜೇತಗೊಂಡ ತಂಡಗಳಿಗೆ ಟ್ರೋಫಿ ವಿತರಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಪೊನ್ನಚ್ಚನ ಶ್ರೀನಿವಾಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪಂದ್ಯಾವಳಿಯಲ್ಲಿ ವಿಜೇತಗೊಂಡ ಕ್ರೀಡಾಳುಗಳಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಟಿ.ಪೂರ್ಣೇಶ್ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿಜೇತ ಪದಕಗಳನ್ನು ವಿತರಿಸಿದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಎಲ್.ಸುಕುಮಾರಿ, ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿ ಎನ್.ಎಲ್. ಸುರೇಶ್ ಕುಮಾರ್ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.
ಕ್ರೀಡಾಶಾಲೆಯ ತರಬೇತುದಾರರಾದ ಎ.ಸಿ.ದಿನಮಣಿ, ಟೂರ್ನಿಯ ತಾಂತ್ರಿಕ ವಿಭಾಗದ ಅಧಿಕಾರಿಗಳಾಗಿ ಕೆ.ಎಚ್.ಗಣೇಶ್ ಕುಮಾರ್, ಪಿ.ಇ.ನಂದ, ಎನ್.ಎಲ್.ಸುರೇಶ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ
ಬಿ.ಎಲ್.ಸಂದೇಶ್, ಎನ್.ಡಿ.ಸೋಮಶೇಖರ್, ಎಚ್.ಎನ್.ರತೀಶ್, ಗಾನದ ಗಣಪತಿ, ನಾಗೇಶ್ ಈಶ್ವರ್, ದೇವಾನಂದ್, ಕೆ.ಎಚ್.ಗಾಯಿತ್ರಿ, ಶ್ರೀಕಲಾ, ಕೆ.ವಿಜಯಲಕ್ಷ್ಮಿ, ಜಿ.ಎಸ್.ಶೈಲಾ, ಎನ್.ಆಶಾ, ಸಿ.ಕೆ.ಭಾರತಿ,
ಕಲಾವಿದ ಬರ್ಮಣ್ಣ ಬೆಟ್ಟಗೇರಿ ಇತರರು ಇದ್ದರು.
ಬೆಂಗಳೂರಿನ ಕ್ರೀಡಾಪ್ರೇಮಿ ಕೆ.ಎಸ್. ಹರೀಶ್ ಪ್ರಾರ್ಥಿಸಿದರು. ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.
ಕೊಡಗಿನ ಎರಡು ತಂಡಗಳು ಆಯ್ಕೆ : ಮೂರು ದಿನಗಳ ಕಾಲ ನಡೆದ ಹಾಕಿ ಟೂರ್ನಿಯ ಅಂತಿಮ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಕಿರಿಯ ಬಾಲಕರು ಮತ್ತು ಹಿರಿಯ ಬಾಲಕಿಯರ ವಿಭಾಗದ ಎರಡು ತಂಡಗಳು ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿರುವುದು ಜಿಲ್ಲೆಯ ಹಾಕಿ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿತು.
14 ವಯೋಮಾನದ ಬಾಲಕರ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದಿಂದ ಗೋಣಿಕೊಪ್ಪ ಲಯನ್ಸ್ ಶಾಲಾ ತಂಡದ ಬಾಲಕರು ಹಾಗೂ 17 ವಯೋಮಾನದ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಮೈಸೂರು ವಿಭಾಗದಿಂದ ಮಡಿಕೇರಿ ನಗರದ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲಾ ಬಾಲಕಿಯರ ತಂಡವು ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಗೊಂಡಿರುವುದು ಹಾಕಿ ಕ್ರೀಡೆಯ ತವರೆನಿಸಿದ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಕ್ರೀಡಾಭಿಮಾನಿಗಳು ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.