ಚೆಟ್ಟಳ್ಳಿ ಅ.29 : ಕೊಡಗಿನ ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರಿಗೆ ಏಷ್ಯ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು. ಕಾವೇರಿ ಅವರು ರಚಿಸಿರುವ 25 ಪುಸ್ತಕಗಳು ಪ್ರಕಟಗೊಂಡಿದ್ದು, ಕಾದಂಬರಿ, ಕಥಾಸಂಕಲನ, ಕವನಮಾಲೆ, ಅದ್ಯಯನ ಗ್ರಂಥ, ನಾಟಕ, ಭಕ್ತಿ ಪ್ರಧಾನ ಕೃತಿ, ಪ್ರಬಂಧಗಳನ್ನು ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮಲಯಾಳಂ ನಲ್ಲಿ ಬರೆದಿದ್ದಾರೆ.
ರಂಗ ಕಲಾವಿದೆ, ಸಮಾಜ ಸೇವಕಿ, ಚಿತ್ರಕಲಾವಿದೆಯಾಗಿರುವ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಉಳುವಂಗಡ ಕಾವೇರಿ ಉದಯ್ ಸಂಭ್ರಮ ಮಹಿಳಾ ಸಂಸ್ಥೆಯ ಸ್ಥಾಪಕ ಸದಸ್ಯೆ ಮತ್ತು ಕಾರ್ಯದರ್ಶಿಯಾಗಿ ಹತ್ತು ವರ್ಷ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲ್ಲೂಕಿನ ಮಹಿಳಾ ಸಾಹಿತ್ಯ ಪ್ರತಿನಿಧಿ, ಗುರುಕುಲ ಕಲಾ ಪ್ರತಿಷ್ಠಾನದ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ, ಕೊಡಗು ಲೇಖಕಿಯರ ಸಂಘದ ಸಹ ಕಾರ್ಯದರ್ಶಿ, ಕೊಡಗು ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವರು.
ಇವರ ಹಲವು ಬರಹಗಳಿಗೆ ಪ್ರಶಸ್ತಿ ದೊರೆತ್ತಿದೆ, ಸಣ್ಣ ಕಥೆ ಕಿರು ಸಿನಿಮಾ, ಕಾದಂಬರಿ ಸಿನಿಮಾ ಆಗಿದೆ. ಸಿನಿಮಾಗಳಿಗಾಗಿ ಹಾಡು ಬರೆದಿದ್ದಾರೆ. ಕೊಡವರ ಆಚಾರ ವಿಚಾರಗಳ ಬಗ್ಗೆ ವಿಚಾರ ಮಂಡನೆ, ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಬರೆದು ಮಹಿಳೆಯರ ತಂಡ ರಚಿಸಿ ನಾಟಕ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇವರ ಸಮಾಜ ಹಾಗೂ ಸಾಹಿತ್ಯ ಸೇವೆಗೆ 2022 ನೇ ಸಾಲಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಪುಸ್ತಕ ಚಂದಿರ ರಾಜ್ಯ ಪ್ರಶಸ್ತಿ, ಸಾಹಿತ್ಯ ತಪಸ್ವಿ ರಾಜ್ಯ ಪ್ರಶಸ್ತಿ, ಸಣ್ಣ ಕಥೆಗೆ ಕುಶ ದತ್ತಿ ನಿಧಿ ಪ್ರಶಸ್ತಿ, ಗುರುಕುಲ ಕಲಾಪ್ರತಿಪ್ಠಾನದಿಂದ ಗುರುಕುಲ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿ ಹಾಗೂ ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ದೊರೆತ್ತಿದೆ.
ಮಗ್ಗುಲ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ದೇವರ ಚರಿತ್ರೆ ಕುರಿತ ಬರಹಕ್ಕಾಗಿ ಸನ್ಮಾನ. 2019 ಮೈಸೂರು ದಸರಾ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಟಿಯಲ್ಲಿ ಸನ್ಮಾನ. ಹುದಿಕೇರಿ ಕೊಡವ ಸಮಾಜದಲ್ಲಿ ಚೆಕ್ಕೆರ ಕುಟುಂಬ ಮತ್ತು ಕೊಡವ ಮಕ್ಕಡ ಕೂಟದಿಂದ ಸನ್ಮಾನ. ಮೈಸೂರು ಕೊಡವ ಸಮಾಜದಲ್ಲಿ ಕೊಡಗ್’ರ ಸಿಪಾಯಿ ಚಿತ್ರ ತಂಡದಿಂದ ಚಿತ್ರ ಕತೆ ಬರಹಕ್ಕಾಗಿ ಸನ್ಮಾನ. ಪೆರುಮಾಳ್ ಪಟ್ಟಿ ಕೋಲ್ ಮಂದಿನಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸನ್ಮಾನ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸನ್ಮಾನ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಯಿಂದ ಸಾಹಿತ್ಯ ಕ್ಷೇತ್ರದ ಸಾಧನೆಗೆ ಸನ್ಮಾನ. 2022 ರ ರಾಜ್ಯ ಮಟ್ಟದ ಮಹಿಳಾ ದಿನಾಚರಣೆಯಂದು ಬೆಂಗಳೂರಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಾಜಿ ಸೈನಿಕರ ಸಂಘ ಮತ್ತು ಸ್ಟೇಟ್ ಬ್ಯಾಂಕ್ ಇಂಡಿಯಾ ದಿಂದ ಸನ್ಮಾನ ದೊರೆತಿದೆ. ಸಾಹಿತ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕೊಡವ ಸಮಾಜದಲ್ಲಿ ಸನ್ಮಾನ ಮಾಡಲಾಗಿದೆ. ಗೋಕಾಕದ ನಾಡಿನ ಸಮಾಚಾರ ಸೇವಾ ಸಂಘ ಮತ್ತು ದಿನಪತ್ರಿಕೆಯವರಿಂದ ಬೆಂಗಳೂರಿನಲ್ಲಿ ಸಾಹಿತ್ಯ ತಪಸ್ವಿ ರಾಜ್ಯ ಪ್ರಶಸ್ತಿಯೊಂದಿಗೆ ಸನ್ಮಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡದಲ್ಲಿ ಮಂತ್ರಿಗಳಾದ ಹಾಲಪ್ಪ ಆಚಾರ್ ಅವರಿಂದ ರಾಜ್ಯ ಪ್ರಶಸ್ತಿಯೊಂದಿಗೆ ಸನ್ಮಾನ ಪಡೆದು ಕೊಂಡಿದ್ದಾರೆ.
ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ.ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿಯಾಗಿರುವ ಉಳುವಂಗಡ ಕಾವೇರಿ ಉದಯ್ ಅವರು 1969 ಮೇ 18 ರಲ್ಲಿ ಜನಿಸಿದರು. ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಉಳುವಂಗಡ ಯು.ಉದಯ ಅವರನ್ನು ವಿವಾಹವಾದ ಇವರಿಗೆ ಲಿಖಿತ್, ಅಮಿತ್ ಇಬ್ಬರು ಪುತ್ರರು ಹಾಗೂ ಪೂಜಿತ, ಗಾಯನ ಇಬ್ಬರು ಸೊಸೆಯರು ಇರುವರು. (ವರದಿ : ಪುತ್ತರಿರ ಕರುಣ್ ಕಾಳಯ್ಯ)