ಮಡಿಕೇರಿ ಅ.31 : ಬಾಗಲಕೋಟೆಯಲ್ಲಿ ನಡೆದ ದಕ್ಷಿಣ ವಲಯ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯ ಬಾಲಕ ಮತ್ತು ಬಾಲಕಿಯರ ಹಾಕಿ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.
ನಾಯಕಿ ನೀತು ಚೌಧರಿ, ಉಪನಾಯಕಿ ಪರ್ಲಿನ್ ಪೂವಮ್ಮ ನೇತೃತ್ವದ ಸಬ್ ಜೂನಿಯರ್ ಬಾಲಕಿಯರ ಹಾಕಿ ತಂಡ ಹಾಗೂ ನಾಯಕ ಧವನ್ ಉಪನಾಯಕ ಆಯೂಷ್ ಶೆಟ್ಟಿ ನೇತೃತ್ವದ ಸಬ್ ಜೂನಿಯರ್ ಬಾಲಕರ ಹಾಕಿ ತಂಡವು ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಲೀಗ್ ಮತ್ತು ನಾಕೌಟ್ ಹಂತದಲ್ಲಿ ತಾನಾಡಿದ ಎಲ್ಲಾ ಪಂದ್ಯಾವಳಿಗಳಲ್ಲೂ ಭರ್ಜರಿ ಗೆಲುವು ದಾಖಲಿಸುವ ಮೂಲಕ ಫೈನಲ್ ಪಂದ್ಯದಲ್ಲಿ ರನ್ನರ್ ಅಫ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ಬಾಲಕಿಯರ ತಂಡವು 0-1 ಗೋಲಿನಿಂದ ಮಹಾರಾಷ್ಟ್ರ ತಂಡದ ವಿರುದ್ಧ ಹಾಗೂ ಕೊಡಗು ವಿದ್ಯಾಲಯ ಬಾಲಕರ ತಂಡವು 0-1 ಗೋಲಿನಿಂದ ಬಾಗಲಕೋಟೆ ತಂಡದ ವಿರುದ್ಧ ಸೊಲನ್ನನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಕೊಡಗು ವಿದ್ಯಾಲಯ ಬಾಲಕಿಯರ ತಂಡದ ನಾಯಕಿ ನೀತು ಚೌಧರಿ ಹಾಗೂ ಕೊಡಗು ವಿದ್ಯಾಲಯದ ಬಾಲಕರ ತಂಡದ ಮುನ್ನಡೆ ಆಟಗಾರ ನಮನ್ ಬೆಳ್ಯಪ್ಪ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಗೆ ಭಾಜನರಾದರು. ತರಬೇತುದಾರರಾದ ದಿನೇಶ್ ಹಾಗೂ ಪಾರ್ವತಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.