ಕಠ್ಮಂಡು: ಪ್ರಬಲ ಭೂಕಂಪಕ್ಕೆ ನೇಪಾಳ ರಾಷ್ಟ್ರ ನಲುಗಿ ಹೋಗಿದ್ದು, ಭೂಕಂಪದ ಪರಿಣಾಮ 128 ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಹಿಮಚ್ಛಾದಿತ ಪ್ರದೇಶವಾಗಿರುವ ನೇಪಾಳದ ಪಶ್ಚಿಮ ಗಡಿ ಭಾಗದಲ್ಲಿ ನೆಲಮಟ್ಟದಿಂದ ಭೂಮಿಯ ಒಳಗೆ ಸುಮಾರು 18 ಕಿ.ಮೀ. ದೂರದಲ್ಲಿ ಕಂಪನ ಕೇಂದ್ರ ಸ್ಥಾನವಿತ್ತು. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ಈ ಕಂಪನಗಳು ಹೊಂದಿದ್ದವು ಎಂದು ಅಮೆರಿಕದ ಜಿಯೋಲಜಿಕಲ್ ಸರ್ವೆ ಇಲಾಖೆ ತಿಳಿಸಿದೆ.
ಈ ನಡುವೆ ಕಂಪನದ ಕೇಂದ್ರ ಸ್ಥಾನದಿಂದ ಅಂದಾಜು 500 ಕಿ.ಮೀ. ದೂರವಿರುವ, ಭಾರತದ ರಾಜಧಾನಿ ದೆಹಲಿಯಲ್ಲೂ ಕಂಪನದ ಅನುಭವಗಳಾಗಿವೆ. ಆದರೆ, ಯಾವುದೇ ಕಟ್ಟಡ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ. ದೆಹಲಿ – ರಾಷ್ಟ್ರ ರಾಜಧಾನಿ ಪ್ರಾಂತ್ಯ (ದೆಹಲಿ – ಎನ್ ಸಿಆರ್) ಹಾಗೂ ನೊಯ್ಡಾ ಮುಂತಾದ ಕಡೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ 11:47 ಕ್ಕೆ ಜಜರ್ಕೋಟ್‌ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಸಾವು- ನೋವಿನ ಬಗ್ಗೆ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ಎಲ್ಲಾ 3 ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ ಎಂದು ನೇಪಾಳ ಪಿಎಂಒ ಟ್ವೀಟ್ ಮಾಡಿದೆ. ನೇಪಾಳದಲ್ಲಿ ಭೂಕಂಪದಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.