ಮಂಗಳೂರು ನ.17 : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿ ಮತ್ತು ಉಡುಪಿ ಪೇಜಾವರ ಮಠದ ಮುಖ್ಯಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ತಿ ಪ್ರತಿಷ್ಠಾಪನೆ ಮಾಡಿದ ಒಂದು ದಿನದ ನಂತರ ಭಕ್ತರು ಭೇಟಿ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಸುಮಾರು 6 ಅಡಿ ಎತ್ತರದ ಶ್ರೀರಾಮನ ಮೂರ್ತಿಯನ್ನು ಕೆತ್ತನೆ ಮಾಡಲಾಗುತ್ತಿದ್ದು, ಜ.17ರಂದು ಮೆರವಣಿಗೆ ಮೂಲಕ ಸರಯೂ ನದಿಗೆ ತರಲಾಗುವುದು. ಅಭಿಷೇಕದ ನಂತರ ಜನವರಿ 18 ರಂದು ದೇವಸ್ಥಾನದ ಗರ್ಭಗುಡಿಯಲ್ಲಿ ಇಡಲಾಗುವುದು. ಮುಂದಿನ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ವಿಗ್ರಹ ಪ್ರತಿಷ್ಠಾಪನೆಯ ಆಚರಣೆಗಳು ದೇಗುಲ ಲೋಕಾರ್ಪಣೆಗೆ ಐದು ದಿನಗಳ ಮೊದಲು ಪ್ರಾರಂಭವಾಗುತ್ತವೆ ಎಂದು ಮಾಹಿತಿ ನೀಡಿದರು.
ಜ.22 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.










