ವಿರಾಜಪೇಟೆ ನ.19 : ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ತಂಡದ ವತಿಯಿಂದ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಲ್ಲುಬಾಯ್ಸ್ ನೈಸ್-ಹೈಟೆಕ್ ಕಪ್ 5 ಪ್ಲಡ್ ಲೈಟ್ ಫುಟ್ಬಾಲ್ ಪಂದ್ಯಾವಳಿಯ ಜೆರ್ಸಿ ಯನ್ನು ಭಾರತ ಫುಟ್ಬಾಲ್ ತಂಡದ ಮಾಜಿ ಆಟಗಾರ ಮಹಮ್ಮದ್ ರಾಫಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಮಹಮ್ಮದ್ ರಾಫಿ, ಇತ್ತಿಚೆಗೆ ಫುಟ್ಬಾಲ್ ಆಟದತ್ತ ಯುವಕರು ಆಸಕ್ತಿ ತೋರಿಸುತ್ತಿದ್ದಾರೆ. ದೈಹಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಉಳಿಸುವ ಕ್ರೀಡಾಕೂಟಗಳು ನಡೆಯಬೇಕು. ಕ್ರೀಡಾ ಮನೋಭಾವನೆಯಿಂದಾಗಿ ಸಾಮಾಜಿಕ ಸಾಮರಸ್ಯ ವೃದ್ಧಿಸಿಕೊಂಡು ಸಮಾಜದ ಆರೋಗ್ಯ ಕಾಪಾಡಬೇಕು ಎಂದರು.
ಕೊಡಗಿನಲ್ಲಿ ಫುಟ್ಬಾಲ್ ಅಕಾಡೆಮಿ ಸ್ಥಾಪನೆಯಾಗಬೇಕು, ಇದು ಕ್ರೀಡಾಸಕ್ತರಿಗೆ ಅನುಕೂಲವಾಗಲಿದೆ. ಇದಕ್ಕೆ ಬೇಕಾದ ಸಲಹೆ ಸಹಕಾರವನ್ನು ನೀಡಲು ನಾನು ತಯಾರಿದ್ದೇನೆ. ಕೊಡಗಿನ ಅತಿಥ್ಯಕ್ಕೆ ಮನಸೋತಿದ್ದೇನೆ. ಬಹಳಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಕಾರ್ಯಕ್ರಮದ ಉದ್ಘಾಟನೆ ವಿಭಿನ್ನವಾಗಿದ್ದು, ಮನಸ್ಸಿಗೆ ಸಂತೋಷ ತಂದಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಇದೀಗ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಮಹತ್ವದ್ದಾಗಿದೆ. ಕ್ರೀಡೆಗಳು ಆತ್ಮಸ್ಥೈರ್ಯ ಮೂಡಿಸುವುದರ ಜೊತೆಗೆ ಬಾಂಧವ್ಯ ಬೆಸೆಯುತ್ತವೆ. ವಿರಾಜಪೇಟೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸುವಂತಾಗಬೇಕು ಎಂದರು.
ಸಾಹಿತಿಗ ರಜಿತ ಕಾರ್ಯಪ್ಪ ಮಾತನಾಡಿ, ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ಕೊಟ್ಟ ತವರೂರು ನಮ್ಮ ಕೊಡಗು. ಕೊಡಗಿನಲ್ಲಿ ಕ್ರೀಡೆಯನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಆದರೆ ಇಲ್ಲಿನ ಕ್ರೀಡಾಪಟುಗಳಿಗೆ ಉತ್ತಮ ಪೆÇ್ರೀತ್ಸಾಹ, ಮೂಲಭೂತ ಸೌಲಭ್ಯಗಳು ಲಭಿಸುತ್ತಿಲ್ಲ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿ ಸೌಲಭ್ಯಗಳನ್ನು ಕಲ್ಪಿಸಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಲು ಸಹಕಾರ ನೀಡಬೇಕಿದೆ. ಕ್ರೀಡಾಪಟುಗಳು ಕಠಿಣ ನಿರಂತರ ಪರಿಶ್ರಮದ ಮೂಲಕ ಯಶಸ್ವಿಗೆ ಪ್ರಯತ್ನಿಸಬೇಕಿದೆ. ಪ್ರತಿಯೊಬ್ಬರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಪರಿಶ್ರಮದ ಮೂಲಕ ಸಾಧನೆ ತೋರಿ ಸಮಾಜದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿ ನಮ್ಮ ಜೀವನದಲ್ಲಿ ಸಾರ್ಥಕತೆ ಉಂಟು ಮಾಡಬೇಕಿದೆ ಎಂದು ಹೇಳಿದರು.
ರೋಟರಿ ಶಾಲೆಯ ಮುಖ್ಯೋಪದ್ಯಾಯರಾದ ವಿಶಾಲಾಕ್ಷಿ ಮಾತನಾಡಿ, ಕ್ರೀಡಾಪಟುಗಳಿಗೆ ದೈಹಿಕ ಶ್ರಮತೆ ಅಗತ್ಯ. ಉತ್ತಮ ಪ್ರದರ್ಶನ ತೋರಲು ದೈಹಿಕ ಹಾಗೂ ಮಾನಸಿಕವಾಗಿ ಸಬಲರಾಗಿರಬೇಕು. ನಿರಂತರ ಅಭ್ಯಾಸದ ಮೂಲಕ ಕ್ರೀಡಾಪಟುಗಳು ತಮ್ಮ ದೈಹಿಕ ಕ್ಷಮತೆ ವೃದ್ಧಿಸಿಕೊಳ್ಳಬೇಕು ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಸರ್ವ ಸದಸ್ಯರ ಸಹಕಾರದೊಂದಿಗೆ ಪಂದ್ಯಾಟವನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.
ಲಿಟಲ್ ಸ್ಕಾಲರ್ ಅಕಾಡೆಮಿಯ ಪೂಜಾ ರವೀಂದ್ರ ಮಾತನಾಡಿ, ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ಇರುವುದರಿಂದ ಇಲ್ಲಿನ ಹೆಚ್ಚು ಕ್ರೀಡಾ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಲ್ಲಿ ಸಹಕಾರಿಯಾಗಿದೆ. ಕ್ರೀಡಾಪಟುಗಳಲ್ಲಿ ಶಿಸ್ತು ಮುಖ್ಯವಾಗಿದೆ. ಆಟಗಾರರು ಶಿಸ್ತನ್ನು ಕಾಪಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸುವಂತಾಗಬೇಕು. ಆಟದಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡೆ ಅತೀ ಮುಖ್ಯವಾಗಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು. ಮಾತ್ರವಲ್ಲದೆ ಕ್ರೀಡಾಕೂಟಗಳು ಸಾಮರಸ್ಯ ಬೆಳೆಸುತ್ತವೆ ಎಂದರು.
ವಿರಾಜಪೇಟೆ ಪುರಸಭೆ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಸಂಘಟನೆಗಳು ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದು ಕ್ರೀಡಾಸಕ್ತರಿಗೆ ಉತ್ತೇಜನ ನೀಡಿದಂತಾಗಿದೆ. ಸಂಘಟನೆಗಳು ಆಗಾಗ ಗ್ರಾಮಾಂತರ ಪ್ರದೇಶದಲ್ಲಿ ಫುಟ್ಬಾಲ್ ಪಂದ್ಯಾಟ ಆಯೋಜಿಸುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಹಾಗೂ ಉತ್ತೇಜನ ನೀಡಿದಂತಾಗುತ್ತದೆ. ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಇಂತಹ ಸ್ಪರ್ಧೆಗಳು ಸೂಕ್ತ ವೇದಿಕೆ. ಪ್ರತಿಯೊಬ್ಬರೂ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಷ್ಟ್ರಮಟ್ಟಕ್ಕೆ ಪ್ರತಿನಿಧಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಲ್ಲುಬಾಯ್ಸ್ ತಂಡದ ಅಧ್ಯಕ್ಷ ಕೆ.ಕೆ.ರಹೀಮ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ಪಂದ್ಯಾಟ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಮಂತ ಕ್ರೀಡೆಯಾಗಿರುವ ಫುಟ್ಬಾಲ್ ಈಗ ದೇಶದಲ್ಲಿಯೂ ಹೆಚ್ಚು ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ವತಿಯಿಂದ ಪಂದ್ಯಾವಳಿ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯಾವಳಿ ನಡೆಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಆರ್ಜಿ ಗ್ರಾ.ಪಂ ಅಧ್ಯಕ್ಷೆ ಫಾತೀಮ, ಲಂಡನ್‍ನಿಂದ ಕೇರಳದವರೆಗೆ ಸೈಕಲ್‍ನಲ್ಲಿ ಪ್ರಯಾಣಿಸಿದ ಪೈಯಾಜ್ ಅಶ್ರಫ್ ಅಲಿ, ರಪೀಕ್ ಕಾಕಮಾಡ, ಸಮಾಜ ಸೇವಕ ಚೇಕು, ಎ.ಎ. ಶರೀಫ್ ಸೇರಿದಂತೆ ಇತರರು ಇದ್ದರು.
ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಒಟ್ಟು 27 ತಂಡಗಳು ಭಾಗವಹಿಸಲಿವೆ.
ಇದೇ ಸಂದರ್ಭ ಭಾರತದ ಮಾಜಿ ಪೂಟ್ಬಾಲ್ ಅಟಗಾರ ಮಹಮ್ಮದ್ ರಾಫಿ ಅವರನ್ನು ಸನ್ಮಾನಿಸಲಾಯಿತು. ಕೊಡಗಿನ ಆತಿಥ್ಯವನ್ನು ಪರಿಚಯಿಸುವುದರ ಮೂಲಕ ಅವರಿಗೆ ಕೊಡಗಿನ ಸಾಂಬಾರ ಪದಾರ್ಥಗಳನ್ನು ಉಡುಗೊರೆಯಾಗಿ ನೀಡಲಾಯಿತು.
ನಮ್ಮ ದೇಶ, ನಮ್ಮ ಜಿಲ್ಲೆ ಸರ್ವ ಧರ್ಮ ಸಮನ್ವಯತೆಯಿಂದ ಕೂಡಿದೆ, ಅನೇಕತೆಯಲ್ಲಿ ಏಕತೆಯನ್ನು ಕಂಡ ನಾಡು ನಮ್ಮದು ಎಂಬ ಸಂದೇಶವನ್ನು ಸಾರುವ ಸಲುವಾಗಿ ಜಿಲ್ಲೆಗೆ ಆಗಮಿಸಿದ ಕೇರಳ ಮೂಲದ ಮಹಮ್ಮದ್ ರಾಫಿ ಅವರಿಗೆ ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಭಾಂಧವರ ಮೂವರು ಪುಟ್ಟ ಮಕ್ಕಳಾದ ನಮನ, ನೆಹನಾ ಫಾತೀಮ, ಲಿಯೋನಾ ಡಾರ್ನೆಲ್ ಹೂಗುಚ್ಚ ನೀಡಿ, ಸಿಹಿ ತಿನ್ನಿಸಿ ಸ್ವಾಗತಿಸಿದರು.
ಇದೇ ಸಂದರ್ಭ ದೇಶಕ್ಕಾಗಿ ಪ್ರಾಣತೆತ್ತು ಮಡಿದ ವೀರಯೋಧರಿಗೆ ಮೈದಾನದಲ್ಲಿ ಮೊಬೈಲ್ ಟಾರ್ಚ್ ಬೆಳಗಿಸುವುದರ ಮೂಲಕ ಸಂತಾಪ ಸೂಚಿಸಲಾಯಿತು. ಮೈದಾನದ ತುಂಬಾ ಕ್ರೀಡಾಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದು ನಿಚ್ಚಿನ ಆಟಗಾರ ಮಹಮ್ಮದ್ ರಾಫಿ ಅವರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
ಕಲ್ಲುಬಾಯ್ಸ್ ತಂಡದ ಸದಸ್ಯರಾದ ನೌಫಲ್, ಫೈಜಲ್, ಶಾಫಿ, ಫಾಜಿಲ್, ಆರ್ಜಿ ಗ್ರಾಮ ಪಂಚಾಯಿತಿಯ ಸದಸ್ಯ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಟಿ. ಬಷೀರ್, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.