ಮಡಿಕೇರಿ ನ.25 : ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಂಡು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡ, ಹೆಚ್.ಎಂ.ವೆಂಕಟೇಶ್, ನಮ್ಮ ನೈಜ ಹೋರಾಟಗಾರರ ವೇದಿಕೆಯ ಸದಸ್ಯರು ಬಾಳುಗೋಡು ಆದಿವಾಸಿ ಜನರು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಆಗುಹೋಗಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೌಲಭ್ಯವಿಲ್ಲದೆ ಆದಿವಾಸಿಗಳು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಆದಿವಾಸಿ ಜನರಿಗೆ ಹಕ್ಕುಪತ್ರ ಮತ್ತು ಯಾವುದೇ ಮೂಲಭೂತ ಸೌಲಭ್ಯ ನೀಡದೆ ಇರುವುದು ದುರಾದೃಷ್ಟಕರ. ಶುದ್ಧ ಕುಡಿಯವ ನೀರಿಲ್ಲದೆ ಅಲ್ಲಿನ ಮಹಿಳೆಯರು ನೀರಿಗಾಗಿ ದೂರದ ಪ್ರದೇಶಕ್ಕೆ ತೆರಳಬೇಕಾಗಿದೆ. ಶೌಚಾಲಯವೂ ಇಲ್ಲದೆ ಕಷ್ಟ ಪಡಬೇಕಾಗಿದೆ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಯೋಜನೆಗಳು ಪ್ರಚಾರಕಷ್ಟೇ ಸೀಮಿತವಾಗಿದೆ ಎಂದು ಎಂದು ಆರೋಪಿಸಿದರು.
ಇನ್ನಾದರು ಜಿಲ್ಲಾಡಳಿತ ಆದಿವಾಸಿಗಳಿಗೆ ಟಾರ್ಪಲ್‍ಗಳನ್ನು ನೀಡುವುದನ್ನು ನಿಲ್ಲಿಸಿ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಾಳಜಿ ತೋರಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಪ್ರೊ.ನಂಜರಾಜ ಅರಸ್, ಹಂದ್ರಾಳ್ ನಾಗಭೂಷಣ್, ಬಿ.ಎಸ್.ಲೋಕೇಶ್ ಹಾಗೂ ಕುಣಿಗಲ್ ನರಸಿಂಹಮೂರ್ತಿ ಉಪಸ್ಥಿತರಿದ್ದರು.









