ಸೋಮವಾರಪೇಟೆ,ನ.25 : ತಾಲೂಕಿನ ಗರ್ವಾಲೆ- ಶಿರಂಗಳ್ಳಿ, ಹಂಡ್ಲಿ ಹಾಗೂ ಸಂಪಿಗೆದಾಳು, ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಿಎಸ್‍ಎನ್‍ಎಲ್ ಟವರ್ ನಿರ್ಮಾಣಕ್ಕೆ ಸಂಸದ ಪ್ರತಾಪ್ ಸಿಂಹ ಭೂಮಿ ಪೂಜೆ ನೆರವೇರಿಸಿದರು.
ಕೊಡಗಿನಲ್ಲಿ ಒಟ್ಟು 63 ಕಡೆಗಳಲ್ಲಿ ನೂತನ ಬಿಎಸ್‍ಎನ್‍ಎಲ್ ಟವರ್ ನಿರ್ಮಾಣವಾಗಲಿದೆ. ಈಗಾಗಲೇ 20 ಕಾಮಗಾರಿಗಳು ಪ್ರಾರಂಭವಾಗಿವೆ. ಮಾರ್ಚ್ ಒಳಗಡೆ ಎಲ್ಲಾ ಟವರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಂಸದರು ತಿಳಿಸಿದರು.
ನಂತರ ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಸಂಸದರು ಪರಿಶೀಲಿಸಿದರು. ರೂ. 1.9 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಚೆಕ್‍ಡ್ಯಾಂ ಹಾಗೂ ಜಾಕ್‍ವೆಲ್ ನಿರ್ಮಾಣ ಮಾಡಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಕೆಲಸ ಪೂರ್ಣಗೊಂಡಿದ್ದು, ಈಗಾಗಲೇ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಂಸದರು ತಿಳಿಸಿದರು.
ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಟರ್ಫ್ ಮೈದಾನ ಕಾಮಗಾರಿಯನ್ನು ಪರಿಶೀಲಿಸಿದ ಸಂಸದರು, ಮಾಜೀ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಯತ್ನದ ಫಲವಾಗಿ ಮೈದಾನ ನಿರ್ಮಾಣಗೊಂಡಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಮಾಜೀ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಜಿ.ಪಂ. ಮಾಜೀ ಸದಸ್ಯ ಬಿ.ಬಿ. ಭಾರತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಹೆಚ್.ಕೆ. ಮಾದಪ್ಪ, ಅಭಿಯಂತರ ಟಿ.ಪಿ. ವೀರೇಂದ್ರ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಶಶಿಕುಮಾರ್, ಮಾಜೀ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.