ಮಡಿಕೇರಿ ನ.26 : ಅಯೋಧ್ಯೆ ನಗರಿಯ ಭವ್ಯ ಶ್ರೀರಾಮ ಮಂದಿರದಲ್ಲಿ ಮುಂದಿನ ವರ್ಷ ಜನವರಿ 22 ರಂದು ಶ್ರೀರಾಮನ ಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆ ಪ್ರತಿ ಮನೆಗಳಿಗೆ ತಲುಪಿಸಲು ಅಯೋಧ್ಯೆಯಿಂದ ಕರ್ನಾಟಕಕ್ಕೆ ಮಂತ್ರಾಕ್ಷತೆಯನ್ನು ತರಲಾಗಿದೆ. ಇದೀಗ ಮಂತ್ರಾಕ್ಷತೆ ಕೊಡಗನ್ನು ಕೂಡ ತಲುಪಿದ್ದು, ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇರಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಉಪಾಧ್ಯಕ್ಷ ಕೂತಿ ಪರಮೇಶ್ ಹಾಗೂ ಸಹ ಕಾರ್ಯದರ್ಶಿ ಸಂತೋಷ್ ಅವರುಗಳು ಬೆಂಗಳೂರಿನ ವಿಹೆಚ್‌ಪಿ ಕಚೇರಿಯಿಂದ ಮಂತ್ರಾಕ್ಷತೆ ತುಂಬಿದ ಬಿಂದಿಗೆಗಳನ್ನು ಪಡೆದು ಮಡಿಕೇರಿಗೆ ತಂದರು.
ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ರಾಜೇಶನಾಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದಲ್ಲಿಡಲಾಗಿರುವ ಮಂತ್ರಾಕ್ಷತೆಯನ್ನು ನ.29 ರಂದು ಓಂಕಾರ ಸದನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಪ್ರಮುಖರಿಗೆ ಹಾಗೂ ಕಾರ್ಯಕರ್ತರಿಗೆ ನೀಡಲಾಗುವುದು. ಇವರು ಕೊಡಗು ಜಿಲ್ಲೆಯ ಪ್ರತಿ ಮನೆಮನೆಗಳಿಗೆ ರಾಮನ ಭಾವಚಿತ್ರ ಮತ್ತು ಮಂತ್ರಾಕ್ಷತೆಯನ್ನು ಹಂಚಲಿದ್ದಾರೆ ಎಂದು ಸುರೇಶ್ ಮುತ್ತಪ್ಪ ತಿಳಿಸಿದರು.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜ.22 ರಂದು ಸೂರ್ಯಾಸ್ತವಾದ ಮೇಲೆ ಪ್ರತಿ ಮನೆಯಲ್ಲಿ ದೀಪ ಬೆಳಗಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿ ದೀಪೋತ್ಸವ ಆಚರಿಸಲು ವಿಶ್ವ ಹಿಂದೂ ಪರಿಷತ್ ಕರೆ ನೀಡುತ್ತದೆ ಎಂದು ಅವರು ಹೇಳಿದರು.
ಪ್ರತಿ ಮನೆಗೂ ಆಯೋಧ್ಯೆಯ ಮಂತ್ರಾಕ್ಷತೆ ತಲುಪುವಂತೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧಾರ ಮಾಡಿದೆ.












