ಮಡಿಕೇರಿ ನ.27 : ದುಬೈನ ಯುಎಇ ಕೊಡವ ಕಮಿಟಿ ವತಿಯಿಂದ ಪುತ್ತರಿ-2023 ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಪ್ರಜಾಪ್ರಭುತ್ವದಲ್ಲಿ ಸಮುದಾಯದ ಪ್ರಾತಿನಿಧ್ಯದ ಮಹತ್ವವನ್ನು ವಿವರಿಸಿದರು.ಕೊಡಗು ಜಿಲ್ಲೆಯ ವಿಶೇಷ ಆಚರಣೆಗಳು ವಿಶ್ವದಾದ್ಯಂತ ಪಸರಿಸಿದೆ. ಸಮುದಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು ಮತ್ತು ನಮ್ಮ ಇರುವಿಕೆಯನ್ನು ಸಂವಿಧಾನ ಬದ್ಧವಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ನಾವು ಏನೇ ಮಾಡಿದರೂ ಮತ್ತು ಎಲ್ಲೇ ಇದ್ದರೂ, ನಮ್ಮ ಚಿಂತನೆಯ ಪ್ರಕ್ರಿಯೆಯು ನಮ್ಮ ಕೊಡವ ಸಮುದಾಯವನ್ನು ಉಳಿಸಿಕೊಳ್ಳುವತ್ತ ಇರಬೇಕು. ನಾವೆಲ್ಲರೂ ಒಗ್ಗೂಡಿ ನಮ್ಮ ಸಮುದಾಯದ ಉಳಿವಿನ ಬಗ್ಗೆ ಯೋಚಿಸಬೇಕು. ಕೊಡವ ಸಮುದಾಯದ ಎಲ್ಲಾ ಕಾರ್ಯಕ್ರಮ ಹಾಗೂ ಆಚರಣೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ತಿಳಿಸಿ, ಜಾಗತಿಕ ಮಟ್ಟದಲ್ಲಿ ಕೊಡವರನ್ನು ಒಗ್ಗೂಡಿಸಲು ಪ್ರಯತ್ನಿಸಿದ ಪಳೆಂಗಂಡ ಅಮಿತ್ ಅವರ ಶ್ರಮವನ್ನು ಪೊನ್ನಣ್ಣ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೊಡಗಿಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಯುಎಇ ಕೊಡವ ಕಮಿಟಿ ಪದಾಧಿಕಾರಿಗಳು ಗಮನ ಸೆಳೆದರು.








