ವಿರಾಜಪೇಟೆ ನ.28 : ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಮೊದಲಿಗೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನೆರೆ ಕಟ್ಟಿ ದೇವಸ್ಥಾನದ ಜಾಗದಲ್ಲಿಯೆ ನೆಡಲಾಗಿದ್ದ ಭತ್ತದ ಕದಿರುವಿಗೆ ಪೂಜಿಸಿ ಹಾಲಿನ ಅಭಿಷೇಕ ಮಾಡಿ ಕದಿರನ್ನು ತೆಗೆಯಲಾಯಿತು. ನಂತರ ದೇವಸ್ಥಾನದ ಆವರಣದಲ್ಲಿ ಹೊಸ ಭತ್ತಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ನಮಿಸಿ ಮಹಾ ಮಂಗಳಾರತಿಯನ್ನು ಬೆಳಗಲಾಯಿತು. ಕದಿರನ್ನು ವಿಶೇಷ ಎಲೆಗಳು ಹಾಗೂ ಬಳ್ಳಿಯಿಂದ ಕಟ್ಟಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಪುತ್ತರಿ ಹಬ್ಬದ ವಿಶೇಷ ಖಾದ್ಯ ತಂಬಿಟ್ಟು ವಿತರಣೆ ಮಾಡಲಾಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









