ಮಡಿಕೇರಿ ನ.29 : ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತೊಟ್ಟಿಲು ಮತ್ತು ಹಾಸಿಗೆಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ಸಹ ರಾಜ್ಯಪಾಲ ದೇವಣಿರ ತಿಲಕ್, ಕಾರ್ಯದರ್ಶಿ ರತ್ನಾಕರ ರೈ, ಇನ್ನರ್‍ವೀಲ್ ಮಾಜಿ ಅಧ್ಯಕ್ಷರುಗಳಾದ ರಫಾಲಿ ರೈ, ಡಾ.ರೇಣುಕ ಮತ್ತಿತರರು ತೊಟ್ಟಿಲು ಮತ್ತು ಹಾಸಿಗೆಯನ್ನು ಮಕ್ಕಳ ರಕ್ಷಣಾ ಘಟಕದ ಸಂಚಾಲಕಿ ಶಾರದಾ ಹಾಗೂ ಸಿಬ್ಬಂದಿ ದರ್ಶನ್ ಗೆ ಹಸ್ತಾಂತರಿಸಿದರು.
ಮಿಸ್ಟಿಹಿಲ್ಸ್ ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಮಾನವ ಜನ್ಮ ಪಡೆಯಲು 86 ಲಕ್ಷ ಜನ್ಮಗಳ ಬಳಿಕವಷ್ಟೇ ಸಾಧ್ಯ ಎಂಬ ಮಾತನ್ನು ಉಲ್ಲೇಖಿಸಿದರು. ಶ್ರೇಷ್ಠ ಮಾನವ ಜನ್ಮ ದೊರೆತರೂ ಬೀದಿ ಪಾಲಾಗುವ ಮಕ್ಕಳ ಆರೈಕೆ ಮಾಡುವ ಸಿಬ್ಬಂದಿಗಳು ಮತ್ತು ಯೋಜನೆ ರೂಪಿಸುವ ಸರಕಾರದ ಹೆಜ್ಜೆ ಶ್ಲಾಘನೀಯ ಎಂದರು.
ಉಪರಾಜ್ಯಪಾಲ ದೇವಣಿರ ತಿಲಕ್ ಮಾತನಾಡಿ, ಈ ರೀತಿಯ ಕೇಂದ್ರಗಳ ಅವಶ್ಯಕತೆಗೆ ರೋಟರಿ ಸದಾ ಸ್ಪಂದಿಸುತ್ತದೆ, ಸೇವಾ ಸಂಸ್ಥೆಗಳು ಅವಶ್ಯಕತೆ ಇರುವಲ್ಲಿ ಸಹಾಯ ಹಸ್ತ ಚಾಚಬೇಕು ಎಂದು ಕರೆ ನೀಡಿದರು.
ಅಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ, ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಅವಶ್ಯವಿರುವ ಪಾದರಕ್ಷೆಗಳನ್ನು ಒದಗಿಸುವ ಭರವಸೆ ನೀಡಿದರು.
ಮಿಸ್ಟಿಹಿಲ್ಸ್ ನಿರ್ದೇಶಕರುಗಳಾದ ಬಿ.ಕೆ.ರವೀಂದ್ರ ರೈ, ಎ.ಕೆ.ವಿನೋದ್, ಸುಮಂತ್ ಪಾಲಾಕ್ಷ, ಇನ್ನರ್‍ವೀಲ್ ಸದಸ್ಯರುಗಳಾದ ರಶ್ಮಿ ಪ್ರವೀಣ್, ರೂಪ ಸುಮಂತ್, ಪ್ರಿಯಾ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.
::: ಮಕ್ಕಳ ರಕ್ಷಣಾ ಘಟಕ :::
ಪೋಷಕರಿಂದ ತಿರಸ್ಕರಿಸಲ್ಪಡುವ ಮತ್ತು ಅನಾಥವಾಗಿರುವ ನವಜಾತ ಶಿಶುವಿನಿಂದ 6 ವರ್ಷದ ವರೆಗಿನ ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕದಲ್ಲಿ ಆರೈಕೆ ಮಾಡಲಾಗುತ್ತದೆ. ಸರ್ಕಾರದ ಶರತ್ತುಗಳಿಗೆ ಒಳಪಟ್ಟು ದತ್ತು ನೀಡುವ ವ್ಯವಸ್ಥೆಯೂ ಇದೆ. ತಪ್ಪಿದಲ್ಲಿ ಬಾಲಭವನದ ಬಾಲಕಿಯರ ಬಾಲಮಂದಿರಕ್ಕೆ ವರ್ಗಾಹಿಸಿ ನೋಡಿಕೊಳ್ಳಲಾಗುತ್ತದೆ.