ಮಡಿಕೇರಿ ಡಿ.08 : ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್ ಅವರು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನಹರಿಸಬೇಕು. ಸಾರ್ವಜನಿಕರು ಸಲ್ಲಿಸುವ ಯಾವುದೇ ಅರ್ಜಿಗಳಿಗೆ ಸಕಾಲದಲ್ಲಿ ಸ್ಪಂದಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‍ಪಿ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೊಂದ ಕುಟುಂಬಗಳಿಗೆ ಇನ್ನೂ ಸಹ ಮನೆ ಕಲ್ಪಿಸಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ತಹಶೀಲ್ದಾರರ ಹಂತದಲ್ಲಿ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅರ್ಹರಿಗೆ ಮನೆ ಕೊಡಿಸಲು ಮುಂದಾಗಬೇಕು. ಇದನ್ನು ಪ್ರಥಮ ಆದ್ಯತೆಯಲ್ಲಿ ನಿರ್ವಹಿಸುವಂತೆ ತಹಶೀಲ್ದಾರರಿಗೆ ಲೋಕಾಯುಕ್ತ ಡಿವೈಎಸ್‍ಪಿ ಸಲಹೆ ನೀಡಿದರು.
ಕೆಲವು ಕಡೆಗಳಲ್ಲಿ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಸರ್ವೇ ಮಾಡಿ ಸಾರ್ವಜನಿಕರ ದೂರುಗಳನ್ನು ಪರಿಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ತಹಶೀಲ್ದಾರರು ಮತ್ತು ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಇಂತಹ ಭೂ ಒತ್ತುವರಿ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ಲೋಕಾಯುಕ್ತ ಡಿವೈಎಸ್‍ಪಿ ಪವನ್ ಕುಮಾರ್ ಅವರು ಹೇಳಿದರು.
ಕೆಲವು ಕಡೆ ರಸ್ತೆ, ಮತ್ತೊಂದು ಕಡೆಗಳಲ್ಲಿ ಪಾರ್ಕಿಂಗ್ ಬಿಡಿಸಬೇಕು ಹೀಗೆ ಹಲವು ರೀತಿಯ ಭೂ ಒತ್ತುವರಿ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‍ಪಿ ಅವರು ವಿವರಿಸಿದರು.
ದೂರುದಾರರು ಸಹ ಸರ್ಕಾರದ ಯಾವುದೇ ಕಚೇರಿಗಳಲ್ಲಿ ಕೆಲಸ ಆಗದಿದ್ದಲ್ಲಿ ನೇರವಾಗಿ ಕಚೇರಿ ಮುಖ್ಯಸ್ಥರನ್ನು ಭೇಟಿ ಮಾಡಬೇಕು. ಅದನ್ನು ಬಿಟ್ಟು ತಳ ಹಂತದ ಅಧಿಕಾರಿ/ಸಿಬ್ಬಂದಿಗಳನ್ನು ಭೇಟಿಯಾಗಿ ಕಾಲಹರಣ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಯಾವುದೇ ಕಚೇರಿಯಲ್ಲಿ ಕಚೇರಿ ಮುಖ್ಯಸ್ಥರಲ್ಲಿ ಮನವಿ ಮಾಡಿದರೆ ಕಾಲಮಿತಿಯಲ್ಲಿ ತಮ್ಮ ಮನವಿಗೆ ಸ್ಪಂದನೆ ದೊರೆಯಲಿದೆ. ಆ ನಿಟ್ಟಿನಲ್ಲಿ ಕಚೇರಿ ಮುಖ್ಯಸ್ಥರನ್ನು ನೇರವಾಗಿ ಸಂಪರ್ಕಿಸುವುದನ್ನು ಮನವಿದಾರರು ರೂಢಿಸಿಕೊಳ್ಳಬೇಕು ಎಂದು ಪವನ್ ಕುಮಾರ್ ಅವರು ಸಲಹೆ ನೀಡಿದರು.
ನಾಪಂಡ ತಿಮ್ಮಯ್ಯ ಎಂಬವರು ಭೂಮಿಯ ಕಂದಾಯ ನಿಗದಿ ಮಾಡುವಂತೆ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಇದುವರೆಗೆ ಕಂದಾಯ ನಿಗದಿ ಮಾಡಿಲ್ಲ ಎಂದು ಲೋಕಾಯಕ್ತ ಡಿವೈಎಸ್‍ಪಿ ಅವರ ಗಮನಕ್ಕೆ ತಂದರು. ಕೆಲವು ಪ್ರಕರಣಗಳಲ್ಲಿ ಕುಟುಂಬಸ್ಥರ ಒಪ್ಪಿಗೆ ಇಲ್ಲದವರಿಗೂ ಕಂದಾಯ ನಿಗದಿ ಮಾಡಲಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಕುಟುಂಬಸ್ಥರಲ್ಲಿ ತಕರಾರು ಇರುವುದರಿಂದ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ತಕರಾರು ಸಲ್ಲಿಸಿರುವ ಕುಟುಂಬಸ್ಥರನ್ನು ಕರೆಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಡಳಿತ, ಉಪವಿಭಾಗ ಹಾಗೂ ತಹಶೀಲ್ದಾರರ ಹಂತದಲ್ಲಿ ಸರ್ವೇ ಮಾಡಲು ಸರ್ವೇ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಸರ್ವೇ ಮಾಡಲು ಅಡ್ಡಿ ಪಡಿಸಿದರೆ ಅಂತಹ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಬೇಕು. ಅಂತಹ ಸಂದರ್ಭದಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಅಧಿಕಾರಿಗಳು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸಲಹೆ ಮಾಡಿದರು.
ಸರ್ಕಾರದ ಎಲ್ಲಾ ಹಂತದ ಅಧಿಕಾರಿಗಳು ನಿಯಮ ಕಾನೂನನ್ನು ಪಾಲಿಸಿ ಕರ್ತವ್ಯ ನಿರ್ವಹಿಸಬೇಕು. ನಿಯಮ ಬಿಟ್ಟು ಕರ್ತವ್ಯ ನಿರ್ವಹಿಸಿ ಎಂದು ಲೋಕಾಯುಕ್ತ ಸಂಸ್ಥೆ ಹೇಳುವುದಿಲ್ಲ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಬೇಕು ಎಂದು ಪವನ್ ಕುಮಾರ್ ಅವರು ತಿಳಿಸಿದರು.
ತಾ.ಪಂ.ಇಒ ಶೇಖರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ ಅವರು ಹಲವು ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಇತರರು ಇದ್ದರು.









