ಮಡಿಕೇರಿ ಡಿ.9 : ಕೊಡಗಿನ ಗಡಿ ಕರಿಕೆ ಗ್ರಾಮದ ಪಚ್ಚೆಪಿಲಾವು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ತೋಟಗಳಿಗೆ ನುಗ್ಗಿ ಕೃಷಿ ಫಸಲನ್ನು ನಾಶಪಡಿಸುತ್ತಿರುವ ಗಜಹಿಂಡು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.
ಸ್ಥಳೀಯ ನಿವಾಸಿ ಹೆಚ್.ಎಂ.ನಂಜುಂಡ ಎಂಬುವವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಕರಿಮೆಣಸು, ಬಾಳೆ, ಅಡಿಕೆ ಮರಗಳು ಮತ್ತು ಸ್ಪಿಂಕ್ಲರ್‍ನ್ನು ನಾಶಪಡಿಸಿವೆ. ಅಕ್ಕಪಕ್ಕದ ತೋಟಗಳಿಗೂ ಲಗ್ಗೆ ಇಟ್ಟಿರುವ ವನ್ಯಜೀವಿಗಳು ನಷ್ಟವನ್ನುಂಟು ಮಾಡಿವೆ.
ಪ್ರತಿವರ್ಷ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗುತ್ತಿದ್ದು, ಫಸಲು ಕಾಡಾನೆಗಳ ಹೊಟ್ಟೆ ಸೇರುತ್ತಿದೆ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಬೇಕು, ದಾಳಿಯನ್ನು ನಿಯಂತ್ರಿಸಲು ಆನೆ ಕಂದಕಗಳನ್ನು ನಿರ್ಮಿಸಬೇಕು ಮತ್ತು ಆನೆಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ವಿತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.










