ಸುಂಟಿಕೊಪ್ಪ ಡಿ.17 : ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ, ಪರಂಪರೆಯ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸುಂಟಿಕೊಪ್ಪ ನಾಡು ಗೌಡ ಸಂಘವನ್ನು ಸಬಲಗೊಳಿಸಲು ಎಲ್ಲರೂ ಕೈಜೋಡಿಸುವಂತೆ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಕರೆ ನೀಡಿದ್ದಾರೆ.
ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಂಘದ 8ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕಳೆದ 7 ವರ್ಷಗಳಿಂದ ಸಂಘ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕ, ಸಮಾಜ ಸೇವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜನಾಂಗದವರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬಲ್ಲಡ್ಕ ಅಭಿಜನ್, ಪುಳ್ಳಿಜ್ಜನ ರಿತೀಶ್, ವಾಣಿಜ್ಯ ವಿಭಾಗದಲ್ಲಿ ಅಯ್ಯಂಡ್ರ ದಿವ್ಯಶ್ರೀ, ಯಂಕನ ವರ್ಧಿನಿ ಪುರಸ್ಕಾರಕ್ಕೆ ಪಾತ್ರರಾದರು.
ಕೊಡಗು ಜಿಲ್ಲಾ ಸರಕಾರಿ ನಿವೃತ್ತ ಗೌಡ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್, ಸುಂಟಿಕೊಪ್ಪ ನಾಡು ಗೌಡ ಸಂಘದ ಉಪಾಧ್ಯಕ್ಷ ಬಿಳಿಯಾರ ಜವಾಹರ್, ಪ್ರಧಾನ ಕಾರ್ಯದರ್ಶಿ ಯಂಕನ ಕೌಶಿಕ್, ಖಜಾಂಚಿ ಪಟ್ಟೆಮನೆ ಉದಯಕುಮಾರ್, ಕುಂಜಿಲನ ಎಸ್.ಮಂಜುನಾಥ್, ಸಹಕಾರ್ಯದರ್ಶಿ ವಸಂತ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಳಿಯಾರ ಜವಾಹರ್ ಸ್ವಾಗತಿಸಿ, ಯಂಕನ ಕೌಶಿಕ್ ನಿರೂಪಿಸಿ, ಪಟ್ಟೆಮನೆ ಕುಸುಮ ವಂದಿಸಿದರು.










