ಸುಂಟಿಕೊಪ್ಪ,ಡಿ.18: ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ‘ಚಡ್ಡಿದೋಸ್ತ್’ ಬಳಗದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟೀರ ನರೇನ್ ಸೋಮಯ್ಯ ಸ್ಪೋಟ್ರ್ಸ್ ಸೆಂಟರ್ ಮೈದಾನದಲ್ಲಿ ಆಯೋಜಿಸಿದ್ದ 5ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಸೌಹಾರ್ದ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಶಿಕ್ಷಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಚಡ್ಡಿದೋಸ್ತ್ ‘ಎ’ ತಂಡ ದ್ಚಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಚಡ್ಡಿದೋಸ್ತ್ ‘ಎ’ ಮತ್ತು ‘ಬಿ’ ತಂಡ, ಕೊಡಗು ಶಿಕ್ಷಕರ ತಂಡ, ಅರಣ್ಯ ಇಲಾಖೆ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳು ಭಾಗವಹಿಸಿದ್ದವು.
ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಕೊಡಗು ಶಿಕ್ಷಕರ ತಂಡ ಮತ್ತು ಚಡ್ಡಿದೋಸ್ತ್ ‘ಎ’ ತಂಡಗಳ ನಡುವೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚಡ್ಡಿದೋಸ್ತ್ ತಂಡ ನಿಗಧಿತ 6 ಓವರುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 48 ರನ್ ಬಾರಿಸಿತು. 49 ರನ್ನುಗಳ ಗುರಿ ಬೆನ್ನಟ್ಟಿದ್ದ ಕೊಡಗು ಶಿಕ್ಷಕರ ತಂಡ ಆಕರ್ಷಕ ಆಟದ ಪ್ರದರ್ಶನದಿಂದ ಕೇವಲ 4 ಓವರುಗಳಿಗೆ 50 ರನ್ನುಗಳನ್ನು ಹೊಡೆದು ವಿಜಯದ ನಗೆಯೊಂದಿಗೆ ಸತತ ನಾಲ್ಕನೇ ಬಾರಿ ‘ಚಡ್ಡಿದೋಸ್ತ್’ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಾರಾಗಿ ಸೇವೆ ಸಲ್ಲಿಸಿ, ಇದೀಗ ಮೈಸೂರು ಹೆಮ್ಮರಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಾನ್ ಪ್ರಾನ್ಸಿಸ್, ಕ್ರೀಡಾಕೂಟ ಒಂದು ನೆಪಮಾತ್ರ. ತಮ್ಮ ಸಹಪಾಠಿಗಳನ್ನು ಒಂದೆಡೆ ಸೇರಿಸುವ ಬಾಂಧವ್ಯದ ಕೊಂಡಿಯಾಗಿದೆ. ವಿದ್ಯಾಭ್ಯಾಸ ಮುಗಿಸಿ ಹೊರಹೋದ ನಂತರ ಮತ್ತೆ ಒಟ್ಟುಗೂಡಿಸುವುದು ಬಹಳ ಕಷ್ಟದ ಕೆಲಸ. ಆ ಕೆಲಸವನ್ನು ಚಡ್ಡಿದೋಸ್ತ್ ಹೆಸರಿನ ಮೂಲಕ ಆಗಿದೆ ಎಂದರಲ್ಲದೇ, ಶಿಷ್ಯಂದಿರು ನಮ್ಮನ್ನು ನೆನಪಿಸಿಕೊಂಡು ಕಾರ್ಯಕ್ರಮ ಆಹ್ವಾನಿಸುವ ಮೂಲಕ ನಾವು ನೀಡಿದ ಶಿಕ್ಷಣಕ್ಕೆ ಸಾರ್ಥಕತೆ ದೊರಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂಪಿ.ನಾಗಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಮರೆಯುವಂತಹ ಸಂದರ್ಭದಲ್ಲಿ ನಮ್ಮ ಮೇಲೆ ಗೌರವ ನೀಡಿ, ಅಭಿನಂಧಿಸಿರುವುದು ಸಂತೋಷ ತಂದಿದೆ. ಕೊಡಗಿನ ಭಾವನಾತ್ಮಕ ಸಂಬಂಧಕ್ಕೆ ನಾವು ಋಣಿಯಾಗಿದ್ದೇವೆ. ಫುಟ್‍ಬಾಲ್ ಲೋಕಕ್ಕೆ ಸುಂಟಿಕೊಪ್ಪಕ್ಕೆ ತನ್ನದೆ ಆದ ಇತಿಹಾಸ ಇದೆ ಎಂಬುದನ್ನು ನೆನಪಿಸಿಕೊಂಡರು.
ಬೆಂಗಳೂರು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಬಿ.ಟಿ.ಕಿಶೋರ್ ಮತ್ತು ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರುಣಾಕರ, ಜಾನ್ ಪ್ರಾನ್ಸಿಸ್ ಮತ್ತು ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ವಿಜೇತವಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಷಕರ ತಂಡದ ವಿಜಯ್ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಷಕ ತಂಡದ ಆಟಗಾರ ನಾಸೀರ್ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ಅಧ್ಯಕ್ಷ ಕೆ.ಕೆ.ಹರೀಶ್ ವಹಿಸಿದ್ದರು.
ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಗುಡ್ಡೆಹೊಸೂರು ಐಎನ್‍ಎಸ್ ಅಕಾಡಮಿಯ ಮಾಲೀಕ ಐಚೆಟ್ಟೀರ ಸೋಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು.
ಚಡ್ಡಿದೋಸ್ತ್ ಬಳಗದ ಸ್ಥಾಪಕಾಧ್ಯಕ್ಷ ಮೋಹನ್, ಎ ತಂಡದ ನಾಯಕ ಸುರೇಶ್, ಬಿ ತಂಡದ ನಾಯಕ ಬಾಲಕೃಷ್ಣ, ಸಂಚಾಲಕ ನವೀನ್, ಬಳಗದ ಉಮ್ಮರ್, ಕೆ.ಎಂ.ವಿನೋದ್, ರಾಘವೇಂದ್ರ, ರಾಕೇಶ್, ಅರುಣ್ ರೈ ಚಂದ್ರ, ಹೇಮಂತ್ ಮಣಿ, ಹರೀಶ್, ಹೇಮಂತ್, ಸಂದೀಪ್, ರಫೀಕ್ ಸೇರಿದಂತೆ ಇತರರು ಹಾಜರಿದ್ದರು.