ಪೊನ್ನಂಪೇಟೆ ಡಿ.24 : ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಇದೇ ತಿಂಗಳ 28ರಿಂದ ಜ.1ರವರೆಗೆ ನಡೆಯಲಿರುವ 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಕರ್ನಾಟಕ ತಂಡ ಸೋಮವಾರದಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿದೆ. ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಎಲ್ಲಾ ಆಟಗಾರರು ಕೊಡಗಿನ ವಿದ್ಯಾರ್ಥಿಗಳು ಎಂಬುದು ವಿಶೇಷವಾಗಿದೆ. ಇದರಿಂದ ಕೊಡಗಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ಕಳೆದ ಅಕ್ಟೋಬರ್ 7 ರಿಂದ 9 ರವರೆಗೆ ಕೂಡಿಗೆಯಲ್ಲಿ ನಡೆದ 17 ವರ್ಷದೊಳಗಿನ ಬಾಲಕರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಪೊನ್ನಂಪೇಟೆಯ ಸಂತ ಅಂತೋಣಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡ ಹಾಕಿ ತಂಡ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿತು. ಇದರಂತೆ ಪೊನ್ನಂಪೇಟೆಯ ಸಂತ ಅಂತೋಣಿ ಪ್ರೌಢಶಾಲೆಯ 11 ವಿದ್ಯಾರ್ಥಿಗಳು ಮತ್ತು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದ ಕೂಡಿಗೆ ಕ್ರೀಡಾ ವಸತಿ ನಿಲಯದ 7 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳ ತಂಡ ಗ್ವಾಲಿಯರ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದೆ.
ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ವಿದ್ಯಾರ್ಥಿ ನಿಶಾಂತ್ ನಾಯಕತ್ವದ ಈ ತಂಡದಲ್ಲಿ ಕೃಪಾಂಕ್ ಕಾಳಪ್ಪ ಗೋಲ್ ಕೀಪರ್ ಆಗಿದ್ದಾರೆ. ಉಳಿದಂತೆ ಎ.ಮಯೂರ್, ಸೋಹನ್ ಕಾರ್ಯಪ್ಪ, ದೀಕ್ಷಿತ್, ಬಿನ್ ಬೋಪಣ್ಣ, ಪವನ್ ಪೊನಣ್ಣ, ಧ್ಯಾನ್ ದೇವಯ್ಯ, ತನಿಷ್ ತಮ್ಮಯ್ಯ, ವಶಿಕ್ ಪೊನ್ನಣ್ಣ ತನಿಷ್ ಮಾದಯ್ಯ ಮತ್ತು ಕೂಡಿಗೆಯ ಕ್ರೀಡಾ ವಸತಿ ನಿಲಯ ವಿದ್ಯಾರ್ಥಿಗಳಾದ ಆಕಾಶ್ ರೆಡ್ಡಿ, ಭಗತ್ ಗೌಡ, ಸಮರ್ಥ್ ನಾಯಕ್, ಪವನ್, ರಾಹುಲ್, ಹೇಮಂತ್ ಮತ್ತು ಮೊಣ್ಣಪ್ಪ ಕರ್ನಾಟಕ ತಂಡದಲ್ಲಿದ್ದಾರೆ. ವೆಂಕಟೇಶ್ ಅವರು ತರಬೇತಿದಾರರಾಗಿರುವ ಈ ತಂಡದ ವ್ಯವಸ್ಥಾಪಕರಾಗಿ ಎಂ. ಟಿ. ಪವನ್ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡ ಸೋಮವಾರ ಮಧ್ಯಾಹ್ನ ಯಶ್ವಂತಪುರದಿಂದ ರೈಲಿನಲ್ಲಿ ಗ್ವಾಲಿಯರ್ ಗೆ ಪ್ರಯಾಣ ಬೆಳೆಸಲಿದೆ. (ರಫೀಕ್ ತೂಚಮಕೇರಿ)









