ಮಡಿಕೇರಿ,ಡಿ.31: ಹೊಸ ವರ್ಷಾಚರಣೆ ಸಂಭ್ರಮಿಸಲು ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಎಸ್ಟೇಟ್ ಸ್ಟೇ, ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ಗಳು ಪ್ರವಾಸಿಗರಿಂದ ತುಂಬಿದ್ದು ಕಂಡು ಬಂತು. ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ದುಬಾರೆ, ನಿಸರ್ಗ ಧಾಮದಲ್ಲಿಯೂ ಪ್ರವಾಸಿಗರ ಸಂಖ್ಯೆ ಎಂದಿಗಿಂತ ಹೆಚ್ಚಿತ್ತು. ಭಾರೀ ಸಂಖ್ಯೆಯ ವಾಹನಗಳಲ್ಲಿ ಪ್ರವಾಸಿಗರು ಜಿಲ್ಲೆಯ ಕಡೆಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿತ್ತು. ಇನ್ನು ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟು ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಹರ ಸಾಹಸ ಪಡಬೇಕಾಯಿತು.
ಇನ್ನು ಮಡಿಕೇರಿಯ ಪ್ರಸಿದ್ದ ಪ್ರವಾಸಿ ತಾಣ ರಾಜಾಸೀಟಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪ್ರವಾಸಿಗರು ವರ್ಷಾಂತ್ಯದ ಸೂರ್ಯಾಸ್ಥಮಕ್ಕಾಗಿ ಕಾದು ಕುಳಿತಿದ್ದರು. ಕೆಂಬಣ್ಣ ಚೆಲ್ಲುತ್ತಾ ಬೆಟ್ಟ ಶ್ರೇಣಿಗಳ ನಡುವೆ ನೇಸರ ಮರೆಯಾಗುವ ಸಂದರ್ಭ ಪ್ರವಾಸಿಗರು ಏಕಕಾಲದಲ್ಲಿ ಇಂದಿನ ವರ್ಷಕ್ಕೆ ಗುಡ್ ಬೈ ಹೇಳುವ ಮೂಲಕ ವರ್ಷಾಂತ್ಯದ ನೇಸರನನ್ನು ಬೀಳ್ಕೊಟ್ಟರು. ಮಾತ್ರವಲ್ಲದೇ ಪ್ರಕೃತಿಯ ಮಡಿಲಲ್ಲಿ ಜಾರುತ್ತಿದ್ದ ಸೂರ್ಯನ ವಿಹಂಗಮ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿ ಕೊಂಡರು. ಮೊಬೈಲ್, ಕ್ಯಾಮರಾಗಳಲ್ಲಿ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. 2023ರ ಕೊನೆಯ ಸೂರ್ಯಾಸ್ಥದ ಬಳಿಕ ಪ್ರವಾಸಿಗರು ರಾಜಾಸೀಟ್‌ನಿಂದ ನಿರ್ಗಮಿಸಿದರು.











