ಮಡಿಕೇರಿ ಜ.2 : ಕಾನೂನಿನ ಅರಿವಿಲ್ಲದವರು ಕಾನೂನು ಪ್ರಕ್ರಿಯೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಇದು ಸರಿಯಾದ ಕ್ರಮವಲ್ಲ. ಹಳೆಯ ಪ್ರಕರಣಗಳ ಇತ್ಯರ್ಥಕ್ಕಾಗಿ ಸಾಮಾನ್ಯ ಸುತ್ತೋಲೆಯನ್ನು ಅಧಿಕಾರಿಗಳ ಮಟ್ಟದಲ್ಲಿ ಕಳುಹಿಸಲಾಗಿದೆ. ರಾಮಮಂದಿರ ಉದ್ಘಾಟನೆಗೆ ನಮ್ಮ ವಿರೋಧವಿಲ್ಲದಿರುವಾಗ ದ್ವೇಷ ರಾಜಕಾರಣ ಮಾಡುವ ಅಗತ್ಯವೇನಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಮಂದಿರ ಉದ್ಘಾಟನೆಗೆ ನಮ್ಮ ವಿರೋಧವಿಲ್ಲವೆಂದು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ನಾನು ಕೂಡ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭ ಕೋರುತ್ತೇನೆ ಎಂದರು.
ನಾಲ್ಕು ವರ್ಷ ಇವರದ್ದೇ ಸರ್ಕಾರವಿದ್ದರೂ ಹಳೆಯ ಪ್ರಕರಣ ಇತ್ಯರ್ಥ ಪಡಿಸದೆ ಮಲಗಿದ್ದರೇ ಎಂದು ಪ್ರಶ್ನಿಸಿದ ಪೊನ್ನಣ್ಣ, ಕಾನೂನು ವ್ಯಾಪ್ತಿಯ ಸುತ್ತೋಲೆಗೂ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮಮಂದಿರಕ್ಕೆ ನಮ್ಮ ವಿರೋಧವಿದಿದ್ದರೆ ನಾವು ದ್ವೇಷ ರಾಜಕಾರಣ ಮಾಡುತ್ತಿದ್ದೇವೆ ಎಂದು ಹೇಳಬಹುದಿತ್ತು. ಆದರೆ ಈಡಿ, ಸಿಬಿಐಯನ್ನು ಕಪಿ ಮುಷ್ಠಿಯಲ್ಲಿಟ್ಟುಕೊಂಡು ರಾಜಕೀಯ ದ್ವೇಷ ಮಾಡುತ್ತಿರುವವರು ಇವರು ಎಂದು ಆರೋಪಿಸಿದರು.
ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಇತ್ತೀಚೆಗೆ ಒಬ್ಬರು ಹೇಳಿಕೊಂಡಿದ್ದರು, ಈ ರೀತಿಯ ಹೇಳಿಕೆಗಳನ್ನು ಜನ ನಂಬುವುದಿಲ್ಲ. ಕಾನೂನು ಬಲ್ಲವರು ಯಾರೂ ಕಾನೂನು ಪ್ರಕ್ರಿಯೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದಿಲ್ಲ ಎಂದು ಪೊನ್ನಣ್ಣ ಹೇಳಿದರು.









