ಮಡಿಕೇರಿ ಜ.2 : ಪ್ರಸಕ್ತ(2023-24) ಸಾಲಿನ ವಿಶ್ವ ಕೌಶಲ್ಯ ಸ್ಪರ್ಧೆಯು 2024 ರಲ್ಲಿ ಪ್ರಾನ್ಸ್ ದೇಶದ ಲಿಯಾನ್‍ನಲ್ಲಿ ನಡೆಯಲಿದೆ.
ಜಗತ್ತಿನಾದ್ಯಂತ 75 ಕ್ಕಿಂತಲೂ ಹೆಚ್ಚು ದೇಶಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. 22 ವರ್ಷದೊಳಗಿನ ಒಂದು ಸಾವಿರಕ್ಕೂ ಹೆಚ್ಚಿನ ಯುವಜನತೆ 59 ಕ್ಕೂ ಹೆಚ್ಚು ಕೌಶಲ್ಯದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತಿದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶ್ರೇಷ್ಟತೆಯ ಕಾರ್ಯಕ್ರಮವಾಗಿದೆ.
ಈ ಸ್ಪರ್ಧೆಗೆ ಪೂರಕವಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ‘ಇಂಡಿಯಾ ಸ್ಕಿಲ್ ಕರ್ನಾಟಕ 2024’ ಸ್ಪರ್ಧೆಯನ್ನು ಪ್ರಾರಂಭಿಸಿದೆ. ಜಿಲ್ಲಾ, ವಲಯ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗೆಲವು ಸಾಧಿಸಿದವರಿಗೆ ನಿರಂತರ ತರಬೇತಿ ಒದಗಿಸಿ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸಲು ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲು ವೇದಿಕೆ ಕಲ್ಪಿಸಿಕೊಡುವುದು ಇಂಡಿಯಾ ಸ್ಕಿಲ್ ಕರ್ನಾಟಕ 2024 ಸ್ಪರ್ಧೆಯ ಮುಖ್ಯ ಗುರಿಯಾಗಿದೆ.
ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಜ.7 ಕೊನೆಯ ದಿನವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು www.skillindiadigital.gov.in ಲಿಂಕ್ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಬಳಸುವ ಮೂಲಕ ಜನವರಿ, 07 ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗೆ 18005999918 ಗೆ ಕರೆ ಮಾಡಿ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿಯ ಜಿಲ್ಲಾ ಸಂಯೋಜಕರಾದ ಎನ್.ಆರ್.ರವಿಕುಮಾರ್ ಅವರ ಮೊಬೈಲ್ ಸಂಖ್ಯೆ 9113935220 ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಉಮಾ ತಿಳಿಸಿದ್ದಾರೆ.









