ವಿರಾಜಪೇಟೆ ಜ.3 : ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣವು ಕೇವಲ ತರಗತಿಯ ನಾಲ್ಕು ಗೋಡೆಗೆ, ಸೀಮಿತವಾಗದೆ ಬದುಕಿನ ಎಲ್ಲಾ ಆಯಾಮದ ಕ್ಷೇತ್ರಗಳಲ್ಲಿ ಶಿಕ್ಷಣ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಬದುಕಿನ ಶಿಕ್ಷಣ ನೀಡುವುದರಲ್ಲಿ ಎಸ್.ಎಂ.ಎಸ್. ಶಾಲೆ ಯಶಸ್ಸನ್ನು ಕಂಡಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆಯ ಅರಮೇರಿಯಲ್ಲಿರುವ ಎಸ್.ಎಂ.ಎಸ್ ಅಕಾಡೆಮಿಯಲ್ಲಿ’ಏಕ ಭಾರತ ಶ್ರೇಷ್ಠ ಭಾರತ’ ಎಂಬ ದ್ಯೇಯವಾಕ್ಯದಡಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವಿಲ್ಲದೆ ನಾವು ಯಶಸ್ವಿಯಾಗಲು ಸಾಧ್ಯವಿಲ್ಲ. ಜ್ಞಾನವು ನಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ನೀವು ಉತ್ತಮ ಶಿಕ್ಷಣವನ್ನು ಹೊಂದಿದ್ದರೆ, ಜೀವನದಲ್ಲಿ ಹೆಚ್ಚು ಯಶಸ್ವಿಯಾಗುತ್ತೀರಿ. ಶಿಕ್ಷಣವು ನಮ್ಮ ಜೀವನಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಇದು ನಮಗೆ ವಿವಿಧ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತದೆ ಮತ್ತು ನಮಗೆ ಹೆಚ್ಚು ಜ್ಞಾನವನ್ನು ನೀಡುತ್ತದೆ. ನಾವು ಹೆಚ್ಚು ಕಲಿಯುತ್ತೇವೆ, ನಮ್ಮ ಸುತ್ತಲಿನ ವಿಷಯಗಳನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಸಂದರ್ಭಗಳನ್ನು ನಿಭಾಯಿಸಲು ಕಲಿಯುತ್ತೇವೆ ಆದ್ದರಿಂದ ಒಬ್ಬರು ಯಾವಾಗಲೂ ನವೀಕೃತವಾಗಿರಲು ಮತ್ತು ಕಲಿತುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಶಾಲೆಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಶಾಲೆ ತನ್ನ ಛಾಪನ್ನು ಮೂಡಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬಾಲ್ಯಾವಸ್ಥೆ ಎನ್ನುವುದು ಶಿಕ್ಷಣಕ್ಕೆ ಮೀಸಲಾದ ಕಾಲ. ಮನೆ ಮತ್ತು ಶಾಲೆ ಮಕ್ಕಳ ಶಿಕ್ಷಣದಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಪ್ರಾರಂಭಿಕ ಹಂತದಲ್ಲಿ ಮನೆಯೇ ಮೊದಲ ಪಾಠಶಾಲೆ. ಮಕ್ಕಳಿಗೆ ಪ್ರೀತಿಯಿಂದ ಕಲಿಸುವ ತಾಣ ಮನೆ. ಆಮೇಲೆ ಶಿಕ್ಷಕರೇ ಅವರ ಸರ್ವಸ್ವ. ಶಿಕ್ಷಕರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಶುಸಿಕ್ಷಿತರನ್ನಾಗಿ ಮಾಡುತ್ತಾರೆ. ದೇಶದ ಭವಿಷ್ಯ ಶಿಕ್ಷಕರ ಮೇಲಿದೆ. ದೇಶದ ಭವಿಷ್ಯದಲ್ಲಿ ಶಾಲೆ ಮತ್ತು ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಶಿಕ್ಷಣ ಅನ್ನುವುದು ಕೇವಲ ಬುದ್ದಿ ಬೆಳೆಸುವುದಲ್ಲ, ಮಕ್ಕಳ ಶಾರೀರಿಕ, ಮಾನಸಿಕ ವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶಿರ್ವಚನ ನೀಡಿ ಮಾತನಾಡಿ, ಹಿರಿಯ ಶ್ರೀಗಳ ಕನಸಿನ ಕೂಸಾಗಿ ಈ ಶಾಲೆ ಬೆಳೆದು ನಿಂತಿದೆ. ಸಿದ್ದಲಿಂಗ ಮಠದ ಸ್ವಾಮೀಜಿಗಳ ಕೃಪಾರ್ಶೀವಾದದಿಂದ, ಮಾರ್ಗದರ್ಶನದಲ್ಲಿ ಬೆಳೆದಿದ್ದೇವೆ. ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟೇ ಶಿಕ್ಷಕರಿಗೂ ಇರುತ್ತದೆ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು.
ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಆರೋಗ್ಯ ಹೊಂದುವಂತೆ ತಿಳಿಸಿದರು.
ಬೆಂಗಳೂರು ಉತ್ತರ ಸಿಜಿಎಸ್ಟಿ ಆಯುಕ್ತರುಗಳಾದ ಡಾ.ಎಂ. ಕೊಟ್ರಸ್ವಾಮಿ ಮಾತನಾಡಿ ಮಕ್ಕಳಿಗೆ ಶಾಲೆ ಒಂದು ವೇದಿಕೆ. ಇಲ್ಲಿ ಮಕ್ಕಳಲ್ಲಿ ಹುದುಗಿರುವ ಹಲವಾರು ಪ್ರತಿಭೆಗಳು ಹೊರಬರಲು ಶಿಕ್ಷಕರು ಪ್ರೇರಕರಾಗುತ್ತಾರೆ. ಶಾಲೆ ಎನ್ನುವುದು ಕಾವು ಕೊಡುವ ಗೂಡು. ನಾವು ಯಾವ ಮೊಟ್ಟೆಯನ್ನಿಟ್ಟು ಕಾವು ಕೊಡುತ್ತೆವೆಯೋ ಅದೇ ಮರಿ ಹೊರಬರುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಕೂಡ. ಯಾವ ಮಕ್ಕಳಲ್ಲಿ ಯಾವ ಮಕ್ಕಳ ಪ್ರತಿಭೆ ಇದೆ. ಮುಂದೆ ಅವರು ಏನಾಗುತ್ತಾರೆ ಎನ್ನುವುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲದೆ ಕೇವಲ ಅಂಕ ಗಳಿಕೆಯಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಮಾಡಲು ಸಾದ್ಯವಿಲ್ಲ. ನಾವು ಮಕ್ಕಳ ಪ್ರತಿಭೆಗಳನ್ನು ಪೋಷಣೆ ಮಾಡುವಂತಾವರಾಗೋಣ ಎಂದು ಹೇಳಿದರು.
ನಿವೃತ್ತ ಆರ್.ಟಿ.ಐ ಆಯುಕ್ತರುಗಳಾದ ಜಿ.ಎಸ್ ವಿರೂಪಾಕ್ಷಯ್ಯ ಮಾತನಾಡಿ ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗರಯಾಗಿದೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳಬೇಕು ಎಂದರು.
ಶಾಲೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಪ್ರಾರಂಭದ ಹಿನ್ನೆಲೆ ಹಾಗೂ ನಡೆದು ಬಂದ ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರಲ್ಲದೆ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾದ ಪ್ರತಿಯೊಬ್ಬರನ್ನು ಸ್ಮರಿಸಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಬಯಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಶಾಸಕ ಪೊನ್ನಣ್ಣ ಹಾಗೂ ಇತರ ಅತಿಥಿ ಗಣ್ಯರ ಭಾವಚಿತ್ರವನ್ನು ಬಿಡಿಸಿ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದರು.
ವೇದಿಕೆಯಲ್ಲಿ ಶಾಸಕ ಪೊನ್ನಣ್ಣ, ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀಗಳಾದ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬೆಂಗಳೂರು ಉತ್ತರ ಸಿಜಿಎಸ್ಟಿ ಆಯುಕ್ತರುಗಳಾದ ಡಾ. ಕೊಟ್ರಸ್ವಾಮಿ ಎಂ, ನಿವೃತ್ತ ಆರ್.ಟಿ.ಐ ಆಯುಕ್ತರುಗಳಾದ ಜಿ.ಎಸ್ ವಿರೂಪಾಕ್ಷಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಂ.ಎಸ್ ವಿದ್ಯಾಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಬೋದಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.