ನಾಪೋಕ್ಲು ಜ.3 : ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು. ಕಳಪೆ ಕಾಮಗಾರಿ ಆಗಿದೆ ಎಂದು ಪ್ರತಿಷ್ಠೆ, ಪ್ರಚಾರಕ್ಕಾಗಿ ತಪ್ಪು ಸಂದೇಶ ನೀಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಚೆರಿಯಪರಂಬು- ಕಲ್ಲುಮೊಟ್ಟೆ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಅವಧಿಯಲ್ಲಿ ರಸ್ತೆ ಕಾಮಗಾರಿ ಕಳಪೆ ಆಗಲು ಬಿಡುವುದಿಲ್ಲ. ಗ್ರಾಮಸ್ಥರಿಗೆ ರಸ್ತೆ ಕಾಮಗಾರಿಯನ್ನು ಪರಿಶೀಲಿಸುವ ಅಧಿಕಾರ ಇದೆ. ಕಾಮಗಾರಿ ಕಳಪೆ ಆಗಿದ್ದರೆ ಇಲಾಖೆಯ ಇಂಜಿನಿಯರ್‍ಗಳು ಪರಿಶೀಲಿಸಿ ಮಾಹಿತಿ ನೀಡುತ್ತಾರೆ. ಏನೇ ಸಂಶಯಗಳಿದ್ದರು ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.
ಈ ಸಂದರ್ಭ ನಾಪೋಕ್ಲು ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾವತಿ ಅರುಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕಾಂಗ್ರೆಸ್ ವಲಯ ಅಧ್ಯಕ್ಷ ಮಾಚೇಟಿರ ಕುಶ ಕುಶಾಲಪ್ಪ, ಕಾಂಗ್ರೆಸ್ ಬ್ಲಾಕ್ ಯೂತ್ ಅಧ್ಯಕ್ಷ ಸಿರಾಜ್, ಕಾಂಗ್ರೆಸ್ ಕಾರ್ಯಕರ್ತರು, ಗ್ರಾ.ಪಂ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ








