ಮಡಿಕೇರಿ ಜ.2 : ಸೋಮವಾರಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೋಮವಾರಪೇಟೆ ಚೌಡ್ಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ‘ಹಾಕಿ ಕ್ರೀಡಾಂಗಣ’ ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು. ಇಲ್ಲಿನ ಕ್ರೀಡಾಂಗಣ ಬಳಿ ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗೆ ಇನ್ನಷ್ಟು ಅನುದಾನ ಬಿಡುಗಡೆಗೆ ಕ್ರೀಡಾ ಸಚಿವರ ಜೊತೆಗೆ ಚರ್ಚಿಸಲಾಗುವುದು ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಶಿಕ್ಷಣ, ಆರೋಗ್ಯ, ಕ್ರೀಡೆ ಸೇರಿದಂತೆ ಹೀಗೆ ವಿವಿಧ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಸೋಮವಾರಪೇಟೆಯಲ್ಲಿ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ ಹಿಂದಿನ ಕ್ರೀಡಾ ಸಚಿವರಾಗಿದ್ದ ಎಂ.ಪಿ.ಅಪ್ಪಚ್ಚುರಂಜನ್ ಅವರ ಕೊಡುಗೆ ಹೆಚ್ಚಿನದ್ದಾಗಿದೆ. ಜೊತೆಗೆ ಹೆಚ್ಚುವರಿ 40 ಲಕ್ಷ ರೂ. ಅನುದಾನ ಬಿಡುಗಡೆಗೆ ಶಾಸಕರಾದ ಡಾ. ಮಂತರ್ ಗೌಡ ಅವರು ಶ್ರಮಿಸಿದ್ದಾರೆ ಎಂದರು. ರಾಷ್ಟ್ರೀಯ ಹಾಕಿ ಕ್ರೀಡಾಕೂಟವು ಸೋಮವಾರಪೇಟೆ, ಕೂಡಿಗೆ, ಮಡಿಕೇರಿ ಮತ್ತು ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಶಾಸಕರಾದ ಡಾ. ಮಂತರ್ ಗೌಡ ಅವರು ಮಾತನಾಡಿ ಸೋಮವಾರಪೇಟೆಯಲ್ಲಿ ಹಾಕಿ ಕ್ರೀಡಾಂಗಣ ಉದ್ಘಾಟನೆಯಾಗಿದ್ದು, ಎಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಜನರ ಕನಸು ನನಸಾಗಿದೆ ಎಂದರು.
ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಕ್ರೀಡಾಂಗಣವನ್ನು ನಿರ್ವಹಣೆ ಮಾಡುವುದು ಅತ್ಯಗತ್ಯವಾಗಿದೆ. ಜೊತೆಗೆ ಸೂಕ್ತ ಬಂದೋ ಬಸ್ತ್ ಮಾಡಬೇಕಿದೆ ಎಂದರು.
ಕ್ರೀಡೆಯು ಪ್ರತಿಯೊಬ್ಬರನ್ನು ಒಟ್ಟುಗೂಡಿಸಲಿದೆ. ಬಾಂಧವ್ಯ ಬೆಳೆಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ ಎಂದು ಶಾಸಕರು ತಿಳಿಸಿದರು.
ಸೋಮವಾರಪೇಟೆ ಹಾಕಿ ಕ್ರೀಡಾಂಗಣಕ್ಕೆ ಸ್ಥಳ ದಾನಿಗಳಾದ ಸಿ.ಕೆ.ಕಾಳಪ್ಪ ಅವರ ಹೆಸರು ಇಡಬೇಕು ಎಂದು ಶಾಸಕರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಸ್ಥಳದಾನಿ ಕುಟುಂಬಸ್ಥರನ್ನು ಮತ್ತು ಕ್ರೀಡಾಪಟು ಬಿ.ಎಂ.ಸುರೇಶ್, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಾಕಿ ಕ್ರೀಡಾಪಟು ಸುಬ್ಬಯ್ಯ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಹಾಕಿ ಕ್ರೀಡಾ ತರಬೇತಿದಾರರಾದ ಶಶಿಧರ ಅವರು ಕ್ರೀಡಾ ವಸತಿ ನಿಲಯ ಆರಂಭಕ್ಕೆ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯರಾದ ನಾಗರಾಜು ಯಾದವ್, ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ತಹಶೀಲ್ದಾರ್ ಎಸ್.ಎನ್.ನರಗುಂದ, ಸೋಮವಾರಪೇಟೆ ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಇತರರು ಇದ್ದರು.











