ವಿರಾಜಪೇಟೆ ಜ.3 : ವಿರಾಜಪೇಟೆಯ ಅರಮೇರಿಯಲ್ಲಿರುವ ಎಸ್.ಎಂ.ಎಸ್ ಅಕಾಡೆಮಿಯಲ್ಲಿ ‘ಏಕ ಭಾರತ ಶ್ರೇಷ್ಠ ಭಾರತ’ ಎಂಬ ದ್ಯೇಯವಾಕ್ಯದಡಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಶಾಲಾ-ಕಾಲೇಜುಗಳ ವಿದ್ಯಾರ್ಥಿ ಯುವ ಪ್ರತಿಭೆಗಳು ಭಾಗವಹಿಸಿ ತಮ್ಮಲ್ಲಿ ಅಡಗಿದ್ದ ಪ್ರತಿಭೆಯನ್ನು ವೇದಿಕೆಯಲ್ಲಿ ಸಾದರಪಡಿಸಿದರು.
ನಾನಾ ಕಲಾ ತಂಡಗಳು ಪ್ರದರ್ಶನ ನೀಡಿದ ಜಾನಪದ ನೃತ್ಯಗಳಾದ ಸಿ.ಬಿ.ಎಸ್.ಇ.ಯ ವಿವಿಧ ವಲಯಗಳಿಗೆ ಒಳಪಟ್ಟ ಡೋಗ್ರಿ, ಭಾಂಗ್ಡ, ಹರಿಯಾಣ, ಲೆಪ್ಚ, ನಾಗ, ಚೆರಾವು, ಥೌಗೋಲ್ ಜಗೋಯಿ, ದುನೋಚಿ, ಉತ್ತರಖಂಡ್ ಪಹಾಡಿ, ಗರ್ಭಾ, ಕರ್ನಾಟಕ ತಮಿಳುನಾಡು ಕೇರಳ ಜನಪದ ನೃತ್ಯಗಳು, ಕೋಲಾಟ, ಕಂಸಾಳೆ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ವೀರಭದ್ರ ಕುಣಿತ, ನಂದಿ ಧ್ವಜಾದ ಕುಣಿತ ಆವರಣದಲ್ಲಿ ಹೊಸದೊಂದು ಜಾನಪದ ಲೋಕವನ್ನೇ ಸೃಷ್ಟಿಸಿತು. ನಿರ್ದಿಷ್ಟ ಕಥಾ ವಸ್ತುಗಳನ್ನಾಧರಿಸಿದ ನೃತ್ಯ ಪ್ರಕಾರಗಳು ವೇದಿಕೆ ಮೇಲೆ ಅಚ್ಚಕಟ್ಟಾಗಿ ಮೂಡಿ ಬಂದವು.
ಎಸ್.ಎಂ.ಎಸ್ ಅಕಾಡೆಮಿಯ ಪುಟ್ಟಮಕ್ಕಳಾದಿಯಾಗಿ 900 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ತಂಡೋಪತಂಡವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕೇರಳ ಶೈಲಿಯ ಮೋಹಿನಿಯಾಟ್ಟಂ, ಶಿವತಾಂಡವ ನೃತ್ಯ, ಗುಜರಾತಿನ ಗರ್ಬಾ ದಾಂಡ್ಯ, ಕಥಕ್ ಹೀಗೆ ವಿವಿಧ ರೀತಿಯ ಭಕ್ತಿ ಭಾವ ಸ್ಫುರಿಸುವ ನೃತ್ಯಗಳು ಕಲಾರಾಧಕರ ಮನಸೆಳೆದವು.
ಸತತ 3 ಗಂಟೆ ಕಾಲ ನಡೆದ ನೃತ್ಯ ಪ್ರದರ್ಶನದಲ್ಲಿ ಕಾಂತಾರ ಖ್ಯಾತಿಯ ದೃಶ್ಯ ಕಲಾ ವೈಭವ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಎಸ್‍ಎಂ.ಎಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ವೈಭವ ಗತವೈಭವವನ್ನು ಮೇಳೈಸುವಂತೆ ಮಾಡಿತ್ತು. ಸಭಾಂಗಣದಲ್ಲಿ ಪೋಷಕರು ಕಿಕ್ಕಿರಿದು ತುಂಬಿದ್ದರು.










