ಮಡಿಕೇರಿ ಜ.7 : ಕುಮಾರಪರ್ವತದ ತಪ್ಪಲಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾದುಕೆಗೆ ಪೂರ್ವ ಶಿಷ್ಟ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ವರ್ಷಕ್ಕೆ ಒಂದು ಬಾರಿ ಮಾತ್ರ ಕುಕ್ಕೆ ದೇಗುಲದ ವತಿಯಿಂದ ಇಲ್ಲಿ ಪೂಜೆ ನೆರವೇರುತ್ತದೆ.
:ಪೌರಾಣಿಕ ಹಿನ್ನೆಲೆ:
ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದನು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ತಾರಕಾದಿ ರಾಕ್ಷಸರನ್ನು ಕುಮಾರಸ್ವಾಮಿ ಈ ಪರ್ವತ ಶ್ರೇಣಿಯಲ್ಲೇ ವಧೆ ಮಾಡಿದನು. ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ(ಚಂಪಾಷಷ್ಠಿ)ಯ ದಿನ ದೇವೇಂದ್ರನ ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳು ಉಲ್ಲೇಖಿಸಿವೆ. ಕುಮಾರಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಇವೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ “ಬಹುಳ ಷಷ್ಠಿ”ಯಂದು ಕುಕ್ಕೆ ದೇಗುಲದ ಪ್ರಧಾನ ಅರ್ಚಕರು ಪೂಜೆ ಸಲ್ಲಿಸುತ್ತಾರೆ.
ದೇಶದ ಮೂಲೆ ಮೂಲೆಯಿಂದ ಚಾರಣ ಪ್ರಿಯರು ಪ್ರಕೃತಿ ಮಾತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕುಮಾರಪರ್ವತಕ್ಕೆ ಬರುತ್ತಾರೆ. ಇದು ಕೇವಲ ಚಾರಣಕಷ್ಟೇ ಜನಪ್ರಿಯವಾಗದೆ, ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿದೆ.
ಇಂತಹ ಪುಣ್ಯ ಸ್ಥಳಕ್ಕೆ ಚಾರಣ ತೆರಳುವವರು ಬೆಟ್ಟವನ್ನು ಪೂಜ್ಯ ಭಾವನೆಯಿಂದ ನೋಡಿ ಹಾಗೂ ಚಾರಣದ ಉದ್ದಕ್ಕೂ ಕಸ ಎಸೆದು ಬೇಜವಾಬ್ದಾರಿ ತನ ಮೆರೆಯಬೇಡಿ. ನೀವು ಬಳಸಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಗಳನ್ನು ನೀವೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.
ಕೃಪೆ #nammasubrahmanya










