ಮಡಿಕೇರಿ ಜ.7 : ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ದೇಶತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ.ಸುಬ್ರಮಣಿ ಅವರು ಕರೆ ನೀಡಿದ್ದಾರೆ.
ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೋರ್ಮೇರ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮುಂದಿನ ಪೀಳಿಗೆಗೆ ಸಂಸ್ಕೃತಿ ಸಂಪ್ರದಾಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ನೊಂದು ಜೀವ ತೆರುವುದು ಬಿಟ್ಟು ತಮ್ಮ ಗುರಿಯನ್ನು ಸಾಧಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಪತ್ರಕರ್ತ ಅಜ್ಜನಿಕಂಡ ಪಿ.ಮಹೇಶ್ ನಾಚಯ್ಯ ಕೊಡವರು ಯಾವುದೇ ಸಂದರ್ಭ ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಬಾರದು. ಹಿರಿಯರು ಬಳುವಳಿ ನೀಡಿದ ಆಸ್ತಿಯಲ್ಲಿ ದುಡಿದು ನೆಮ್ಮದಿಯನ್ನು ಕಾಣಬೇಕು. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಜನಾಂಗದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಾಜಕ್ಕೆ ದುಡಿದ ಹಿರಿಯರನ್ನು ನೆನಪಿಸಿ, ಪುತ್ತರಿ ವಿಶೇಷತೆ ಬಗ್ಗೆ ತಿಳಿಸಿದರು. ಯುವ ಜನಾಂಗಕ್ಕೆ ಸಮೃದ್ಧಿ ನಿಯಮ ನೀತಿಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಎಸ್ ಎಸ್ ಎಲ್ ಸಿ, ಪಿ ಯು ಸಿ ಮತ್ತು ಉನ್ನತ ಶಿಕ್ಷಣ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಮಕ್ಕಳಿಂದ ನೃತ್ಯ, ಭರತನಾಟ್ಯ, ಉಮ್ಮ ತಾಟ್ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಪುಲಿಯಂಡ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ವಾಂಚೀರ ಮನು ನಂಜುಂಡ, ಖಜಾಂಚಿ ಬಲ್ಯಾಟಂಡ ಚಂಗಪ್ಪ ಇದ್ದರು. ಕೊಕ್ಕಲೆರ ಧರಣಿ ಕಾರ್ಯಕ್ರಮ ನಿರೂಪಿಸಿದರು.










