ಮಡಿಕೇರಿ ಜ.7 : ಸೋಮವಾರಪೇಟೆ ತಾಲ್ಲೂಕಿನ ಹೋಬಳಿ ಕೇಂದ್ರವಾದ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಾಗಿರುವುದರಿಂದ ಜನಸಾಮಾನ್ಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 1 ವರ್ಷದಲ್ಲಿ 3 ಮಂದಿ ವರ್ವಾವಣೆಗೊಂಡಿದ್ದಾರೆ. ಕಳೆದ 3 ತಿಂಗಳಿನಿಂದ ಪಿಡಿಒ ಇಲ್ಲದೆ ಗ್ರಾಮ ಪಂಚಾಯಿತಿಯ 2 ಸಾಮಾನ್ಯ ಸಭೆಯೂ ನಡೆದಿಲ್ಲ. ಪಿಡಿಒ ಆಗಿದ್ದ ಸುಮೇಶ್ ಬೇರೆಡೆಗೆ ವರ್ಗವಾದ ನಂತರ ಸುರೇಶ್ ಎಂಬುವವರನ್ನು ನಿಯೋಜಿಸಲಾಗಿತ್ತು. ಕೆಲವು ದಿನಗಳು ಕರ್ತವ್ಯ ನಿರ್ವಹಿಸಿದ ನಂತರ ಅವರನ್ನು ಇಲ್ಲಿನ ಸೇವೆಯಿಂದ ಮುಕ್ತ್ತಗೊಳಿಸಿ ದಕ್ಷಿಣ ಕೊಡಗಿನ ಗ್ರಾ.ಪಂ ಗೆ ನೇಮಿಸಲಾಗಿದೆ.
ನೂತನ ಪಿಡಿಓ ಬಂದ ನಂತರ ತಮ್ಮ್ ನೀಡಿ ಅವರ ಹೆಸರಿಗೆ ಪಂಚಾಯಿತಿ ದಾಖಲಾತಿ ಬರಲು 1 ತಿಂಗಳು ಕಾಲಾವಕಾಶ ಬೇಕಾಗಿದೆ. ಮಾದಾಪುರ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ನಿಯೋಗ ತೆರಳಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಶ್ವತ ಪಿಡಿಒ ನೇಮಕಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರೂ ಇದುವರೆಗೆ ನೇಮಕವಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಪಿಡಿಒ ಕೊರತೆಯಿಂದ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ, ಅಲ್ಲದೆ ಅರ್ಜಿಗಳು ವಿಲೇವಾರಿಯಾಗದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
::: 3 ತಿಂಗಳಿನಿಂದ ವೈದ್ಯರಿಲ್ಲ :::
ಮತ್ತೊದೆಡೆ ಮಾದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 3 ತಿಂಗಳಿನಿಂದ ವೈದ್ಯರಿಲ್ಲದೆ ರೋಗಿಗಳ ಪಾಡು ಆ ಆರೋಗ್ಯ ಇಲಾಖೆಗೇ ಪ್ರೀತಿ ಎನ್ನುವಂತ್ತಾಗಿದೆ.
ಶ್ರುಶೂಷಕಿಯರು ಪ್ರತಿನಿತ್ಯ ಆಸ್ಪತ್ರೆ ಬಾಗಿಲು ತೆರೆದು ರೋಗಿಗಳ ಸಣ್ಣಪುಟ್ಟ ಖಾಯಿಲೆಗೆ ಔಷಧ ನೀಡುತ್ತಿದ್ದಾರೆ. ಸೂರ್ಲಬ್ಬಿ, ಗವಾಲೆ, ಮೂವತ್ತೋಕ್ಕಲು, ಹಾಡಗೇರಿ, ಮಾದಾಪುರ, ಹಟ್ಟಿಹೊಳೆ, ಹಾಲೇರಿ, ಕಾಂಡನಕೊಲ್ಲಿ, ಕುಂಬೂರು, ಗರಗಂದೂರು ಗ್ರಾಮಸ್ಥರು ಹಾಗೂ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರ್ಮಿಕರು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ.
::: ಜಾನುವಾರುಗಳಿಗೆ ಔಷಧಿ ಇಲ್ಲ :::
ಇಲ್ಲಿನ ಪಶುವೈದ್ಯ ಇಲಾಖೆ ಕಛೇರಿ ಇದ್ದೂ ಇಲ್ಲದಂತಾಗಿದೆ. ರೈತರು ಜಾನುವಾರುಗಳಿಗೆ ಔಷಧಿಗೆಂದು ಬಂದರೆ ‘ಡಿ’ ಗ್ರೂಪ್ ನೌಕರ ಮಾತ್ರ ಇರುತ್ತಾರೆ. ಯಾವುದೇ ಔಷಧಿ ಲಭಿಸುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರಾದ ಪೂವಣ್ಣ ಬಿದ್ದಣಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಾದಾಪುರದಲ್ಲಿ ಕಂದಾಯ ಇಲಾಖೆಯ ಹೋಬಳಿ ಕಛೇರಿ ಸ್ಥಾಪಿಸಬೇಕೆಂಬ ಗ್ರಾಮಸ್ಥರ ಬೇಡಿಕೆಯೂ ನೆನೆಗುದಿಗೆ ಬಿದ್ದಿದೆ. ಮಾದಾಪುರ ಬೆಳೆಯುತ್ತಿರುವ ಪಟ್ಟಣವಾಗಿದ್ದರೂ ಸರಕಾರಿ ಸೌಲಭ್ಯಗಳಿಂದ ಹಾಗೂ ಹುದ್ದೆಗಳಿಗೆ ವಂಚಿತವಾಗಿದೆ. ಇದು ಗ್ರಾಮಸ್ಥರ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ಕೂಡ ನಿಂತ ನೀರಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.










