ನಾಪೋಕ್ಲು ಜ.8 : ಕಾಡಾನೆ ಲದ್ದಿಯಲ್ಲಿ ಕಾಫಿ ಬೀಜಗಲು ಯಥೇಚ್ಛವಾಗಿ ಕಂಡುಬರುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ರೈತರು ಆತಂಕಕ್ಕೆ ಈಡಾಗಿದ್ದಾರೆ. ಈ ಹಿಂದೆ ಕಾಡಾನೆಗಳು ಕಾಫಿ, ಅಡಿಕೆ, ತೆಂಗು ಫಲಬರಿತ ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ ಇದೀಗ ಕಾಫಿಯ ಹಣ್ಣುಗಳನ್ನು ತಿಂದ ನಷ್ಟಪಡಿಸುತ್ತಿವೆ.
ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ ನಾಲ್ಕಾರು ಆನೆಗಳು ಅಡ್ಡಾಡುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಭತ್ತದ ಕಟಾವು ಮುಗಿದಿದ್ದು ಇದೀಗ ಕಾಡಾನೆಗಳು ತೋಟ ನುಸುಳಿವೆ. ಕಾಫಿಯ ರೆಂಬೆಗಳನ್ನು ಮುರಿದು ಹಣ್ಣಾಗಿರುವ ಕಾಫಿಯನ್ನು ತಿಂದು ನಷ್ಟಪಡಿಸುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಲ್ಲದೆ ಸರಕಾರ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾ.ಪಂ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ








