ಮಡಿಕೇರಿ ಜ.9 : ಬಸ್ ತಂಗುದಾಣವೆಂದರೆ ಬಿರುಕು ಬಿಟ್ಟ ಗೋಡೆಗಳು, ಮುರಿದ ಛಾವಣಿ, ಕಸದ ರಾಶಿ, ದುರ್ನಾತ ಬೀರುವ ಶೌಚಾಲಯ ಕಣ್ಣ ಮುಂದೆ ಹಾದು ಹೋಗುತ್ತದೆ.
ಪರಿಣಾಮವಾಗಿ ತಂಗುದಾಣವಿದ್ದರೂ ಪ್ರಯಾಣಿಕರು ಹೊರಗೆ ಮರದ ನೆರಳಲ್ಲೋ, ರಸ್ತೆ ಬದಿಯ ಅಂಗಡಿಗಳಲ್ಲೋ ಆಶ್ರಯ ಪಡೆಯುವುದು ಸಾಮಾನ್ಯವಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಬಣ್ಣ ಬಣ್ಣದ ಚಿತ್ರಗಳೊಂದಿಗೆ ಹಲವು ಸಂದೇಶಗಳನ್ನು ಸಾರುವ ಬಸ್ ತಂಗುದಾಣವೊಂದು ಕೊಡಗಿನ ತೀರ್ಥಕ್ಷೇತ್ರವಾದ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ನಿರ್ಮಾಣವಾಗಿದ್ದು, ಇದೀಗ ಈ ಬಸ್ ತಂಗುದಾಣ ಜನಾಕರ್ಷಣೆಯ ಕೇಂದ್ರವಾಗಿದೆ.
ಭಾಗಮಂಡಲ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಳನ ರವಿ ಅವರ ಕಲ್ಪನೆಯ ಕೂಸಾಗಿರುವ ಈ ತಂಗುದಾಣದಲ್ಲಿ ನೇಗಿಲ ಯೋಗಿ, ಬೆಳೆಯ ಸಿರಿ ಮೊಳಕೆಯಲ್ಲಿ, ಎಪಿಜೆ ಅಬ್ದುಲ್ ಕಲಾಂ, ಚಂದ್ರಯಾನದ ವಿಕ್ರಂ ಲ್ಯಾಂಡರ್ ಸೇರಿದಂತೆ ಆಕರ್ಷಕ ಚಿತ್ರಗಳು ರಾರಾಜಿಸುತ್ತಿವೆ.
ಸುಮಾರು 32 ಅಡಿ ಉದ್ದ, 10 ಅಡಿ ಅಗಲದ ಅಂದಾಜು 10 ಜನ ಕೂರಲು ಸ್ಥಳಾವಕಾಶವಿರುವ ಈ ತಂಗುದಾಣದಲ್ಲಿ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಸಹಿತ ನಿರ್ಮಾಣವಾಗಿರುವ ಏಕೈಕ ತಂಗುದಾಣ ಇದು ಎಂಬುದು ಇದರ ಮತ್ತೊಂದು ಹೆಗ್ಗಳಿಕೆ.
ಕೋರಂಗಾಲ ಗ್ರಾಮದಲ್ಲಿ ವಾಜಪೇಯಿ ವಸತಿ ಶಾಲೆಯಿದ್ದು, ಸುಮಾರು 520 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರನ್ನು ಕಾಣಲೆಂದು ದಿನಂಪ್ರತಿ ದೂರದ ಊರುಗಳಿಂದ ಪೋಷಕರು ಬರುತ್ತಾರೆ. ಆದರೆ ಇವರಿಗೆ ಶಾಲೆಯ ಒಳಗೆ ಇರುವ ಶೌಚಾಲಯ ಬಳಸಲು ಅನುಮತಿ ಇರುವುದಿಲ್ಲ. ಅದರಲ್ಲೂ ಮಹಿಳೆಯರು ಸಾಕಷ್ಟು ಸಂಕಟ ಅನುಭವಿಸಬೇಕಾಗುತ್ತದೆ. ಇದರೊಂದಿಗೆ ಭಾಗಮಂಡಲಕ್ಕೆ ಪ್ರತಿನಿತ್ಯ ಅಧಿಕ ಸಂಖ್ಯೆಯ ಭಕ್ತರು, ಪ್ರವಾಸಿಗರೂ ಆಗಮಿಸುತ್ತಾರೆ. ಇವರೆಲ್ಲರಿಗೂ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಬಸ್ ತಂಗುದಾಣಕ್ಕೆ ಹೊಂದಿಕೊಂಡಂತೆ ಶೌಚಾಲಯ ನಿರ್ಮಿಸಲಾಗಿದೆ. ಸಾರ್ವಜನಿಕ ತಾಣವಾಗಿರುವುದರಿಂದ ಹೆಚ್ಚು ಸ್ವಚ್ಛವಾಗಿರಬೇಕೆಂಬ ದಿಸೆಯಲ್ಲಿ ಪಾಶ್ಚಾತ್ಯ ಶೈಲಿಯ ಕಮೋಡ್ ಬಳಸಲಾಗಿದೆ. ಗ್ರಾಮದ ರಸ್ತೆ ಬದಿಯಲ್ಲೇ ಜಲಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಇರುವುದರಿಂದ ಶೌಚಾಲಯಕ್ಕೆ ನೀರಿನ ಸಂಪರ್ಕ ನೀಡುವುದಕ್ಕೂ ಸಮಸ್ಯೆಯಿಲ್ಲ ಎನ್ನುತ್ತಾರೆ ಪಂಚಾಯತ್ ಅಧ್ಯಕ್ಷ ಕಾಳನ ರವಿ.
ಸಾಮಾನ್ಯವಾಗಿ ಬಸು ತಂಗುದಾಣಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಭಿತ್ತಿ ಪತ್ರವನ್ನು ಅಂಟಿಸಲಾಗುತ್ತದೆ. ಇದರಿಂದ ತಂಗುದಾಣಗಳ ಅಂದ ಕೆಡುತ್ತದೆ. ಅದಕ್ಕಾಗಿ ಇಲ್ಲಿ ದೇಶದ ಸಾಧನೆಯನ್ನು ಬಿಂಬಿಸುವ ಚಿತ್ರಗಳನ್ನು ರಚಿಸಲಾಗಿದ್ದು, ಭಿತ್ತಿ ಪತ್ರಗಳನ್ನು ಅಂಟಿಸಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ತಂಗುದಾಣದ ಚಿತ್ರಗಳ ರಚನೆಗೆ ಸ್ವತಃ ಖರ್ಚು ಮಾಡಿದ್ದೇನೆ. ದಾನಿಗಳೂ ನೆರವು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಸುಮಾರು 5.5 ಲಕ್ಷ ವೆಚ್ಚದಲ್ಲಿ ಉತ್ತಮ ಶೆಲ್ಟರ್ ನಿರ್ಮಾಣಗೊಂಡಿದೆ. ಭಕ್ತರಿಗೆ, ಪ್ರವಾಸಿಗರಿಗೆ, ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೌಚಾಲಯ ಸಹಿತ ಬಸ್ ಶೆಲ್ಟರ್ ನಿರ್ಮಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಕಾಳನ ರವಿ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಈ ಮೂಲಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾಳನ ರವಿ ಅವರ ಕನಸು ಎಲ್ಲರ ಸಹಕಾರದಿಂದ ನನಸಾಗಿದ್ದು, ಇಂತಹ ತಂಗುದಾಣಗಳು ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯತ್’ಗಳ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡರೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ.










