ಸುಂಟಿಕೊಪ್ಪ, ಜ. 9 : ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 2024 ನೇ ನೂತನ ಸಾಲಿನ ಅಧ್ಯಕ್ಷರಾಗಿ ನೇಮಕಗೊಂಡ ಸಂಪತ್ ಕುಮಾರ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹಾರಂಗಿ ರಸ್ತೆಯಲ್ಲಿರುವ ಅತ್ತೂರು ಗ್ರಾಮದ ಆರ್- ಕ್ಯೂಬ್ ಫಾರ್ಮ್ ಹೌಸ್ ನ ಸಭಾಂಗಣದಲ್ಲಿ ನಡೆಯಿತು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ 2023ನೇ ಸಾಲಿನ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜೆಸಿಐ ವಲಯ 14ರ ಅಧ್ಯಕ್ಷೆ ಆಶಾ ಜೈನ್ ಅವರು ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ಬೋಧಿಸಿದರು.
ನಂತರ ಮಾತನಾಡಿದ ಜೆಸಿಐ ವಲಯ ಅಧ್ಯಕ್ಷೆ ಆಶಾ ಜೈನ್ ಅವರು, ಯುವ ಸಮುದಾಯದಲ್ಲಿ ಶಿಸ್ತು, ಸಮಯಪಾಲನೆ, ಸಂಯಮ, ಉತ್ತಮ ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ಬೆಳೆಸಲು ಸಹಕಾರಿಯಾದ ಜೆಸಿಐ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಯುವಶಕ್ತಿಯ, ನಾಗರಿಕರ ಜಾಗತಿಕ ಸಂಸ್ಥೆಯಾಗಿದೆ. ಯುವ ಸಮುದಾಯದಲ್ಲಿ ಧನಾತ್ಮಕ ಬದಲಾವಣೆಯೊಂದಿಗೆ ಕ್ರೀಯಾಶೀಲ ವ್ಯಕ್ತಿತ್ವ, ನಾಯಕತ್ವ, ಉತ್ತಮ ಉದ್ಯಮಶೀಲ ಕೌಶಲ್ಯಗಳನ್ನು ಬೆಳೆಸುವುದರೊಂದಿಗೆ ದೇಶದಲ್ಲಿ ಬ್ರಾತೃತ್ವ ಬೆಳೆಸಿ ವಿಶ್ವದಾದ್ಯಂತ ಸ್ನೇಹಪರತೆ ಬೆಳೆಸುವಲ್ಲಿ ಈ ಸಂಸ್ಥೆ ಪ್ರಮುಖ ವೇದಿಕೆಯಾಗಿದೆ ಎಂದರು.
ಜೆಸಿಐ ವಲಯ 14ರ ಉಪಾಧ್ಯಕ್ಷ ಶುಭಾಂಗ್ ಸಿದ್ಧಾರ್ಥ ಮಾತನಾಡಿ, ಈ ಸಂಸ್ಥೆಯು ಯುವ ಜನಾಂಗದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಸೃಷ್ಟಿಸಲು ಕೌಶಲ್ಯ ತರಬೇತಿ ಮೂಲಕ ಅವರಲ್ಲಿ ಆದರ್ಶ ವ್ಯಕ್ತಿತ್ವ ಹಾಗೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಲು ಉತ್ತಮ ವೇದಿಕೆ ಕಲ್ಪಿಸಲು ಪ್ರೇರಣೆ ನೀಡುತ್ತದೆ ಎಂದರು.
ಜೆಸಿಐ ಸಂಸ್ಥೆಯ ಹಿರಿಯ ಸದಸ್ಯರ ಸಂಘದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಯುವಕರನ್ನು ಉತ್ತಮ ನಾಗರಿಕರನ್ನಾಗಿಸಲು ಹಾಗೂ ಅವರಲ್ಲಿ ಪರಸ್ಪರ ಸಹಕಾರ, ಸದ್ಭಾವನೆ ಬೆಳೆಸಲು ಈ ಸಂಸ್ಥೆ ಸಹಕಾರಿಯಾಗಿದೆ ಎಂದರು.
ಜೆಸಿಐ ಸಂಸ್ಥೆಯ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಜೆಸಿಐ ವತಿಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಂಸ್ಥೆಯ ನೂತನ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಜೆಸಿಐ ನ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿದರು.
ಸಂಸ್ಥೆಯ ನೂತನ ಕಾರ್ಯದರ್ಶಿ ಮಂಜುನಾಥ್, ವಲಯ ಪೂರ್ವಾಧ್ಯಕ್ಷ ದೇವಿಪ್ರಸಾದ್ ಕಾಯಾರ್ ಮಾರ್, ಖಜಾಂಚಿ ನಂದಕುಮಾರ್, ಜೆಸಿರೇಟ್ ಟಿ.ವಿ.ಶೈಲಾ, ಸಂಸ್ಥೆಯ ಸದಸ್ಯರಾದ ಡೆನಿಸ್ ಡಿಸೋಜ, ಮುರುಗೇಶ್, ಪ್ರೀತಂ ಪ್ರಭಕರ್, ಮನು ಅಚ್ಚಮಯ್ಯ, ಜಿ.ಬಿ.ಹರೀಶ್, ಅರುಣ್ ಕುಮಾರ್, ಫೆಲ್ಸಿ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷೆ ಆಶಾ ಜೈನ್, ಉಪಾಧ್ಯಕ್ಷ ಶುಭಾಂಗ್ ಸಿದ್ದಾರ್ಥ, ಸಂಸ್ಥೆಯ ಹಿರಿಯ ಸದಸ್ಯರ ಸಂಘದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ಆರ್- ಕ್ಯೂಬ್ ಮಾಲೀಕ ಜಾನ್ ಪುಲಿಕಲ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.








