ಚೆಯ್ಯಂಡಾಣೆ ಜ.9 : ಯಾರನ್ನು ಬೇಡವೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದತೆಯಿಂದ ಕಾಣುವ ದೇಶವಿದ್ದರೆ ಅದು ನಮ್ಮ ಭಾರತ ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಹೇಳಿದರು.
ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ಧ್ಯೇಯ ವಾಕ್ಯದಲ್ಲಿ ಜ.24ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ನಾಪೋಕ್ಲು ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮದೇಶದ ಪರಂಪರೆ ಎಲ್ಲರನ್ನೂ ಒಗ್ಗೂಡಿಸುವ ಪರಂಪರೆಯಾಗಿದೆ. ಎಲ್ಲಾ ವರ್ಗದವರಿಗೂ ಕೆಂಪು ಹಾಸನ್ನು ಹಾಸಿದ ನಾಡು ಇದಾಗಿದೆ. ವಿಶ್ವದ ಹಲವಾರು ದೇಶಕ್ಕೆ ಮಾದರಿಯಾಗಬಲ್ಲ ನಮ್ಮ ದೇಶದಲ್ಲಿ ಎಲ್ಲರಿಗು ಮುಕ್ತವಾದ ಸ್ವಾತಂತ್ರ್ಯ ನೀಡಿ ಮಾದರಿಯಾದ ರಾಷ್ಟ್ರವಾಗಿದೆ. ಇದರ ಬಗ್ಗೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಳಕೇರಿ, 1994 ರ ಜನವರಿ 24 ರಂದು ತಾಜುಲ್ ಉಲಮಾ ಬೇಕಲ ಉಸ್ತಾದರ ನೇತೃತ್ವದಲ್ಲಿ ರೂಪುಗೊಂಡ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಕಳೆದ ಹಲವಾರು ದಿನಗಳಿಂದ ಮಂಗಳೂರಿನಲ್ಲಿ ನಡೆಯಲಿರುವ ಮಹಾ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ಕರ್ನಾಟಕ ಕಂಡ ಅತ್ಯಂತ ದೊಡ್ಡ ಸುನ್ನಿ ಸಂಘಟನೆಯ ಸಮ್ಮೇಳನ ಇದಾಗಿದ್ದು, ಈ ಸಮ್ಮೇಳನದಲ್ಲಿ ಸುನ್ನಿ ಒಕ್ಕೂಟದ ನಾಯಕ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮ್ಮಯ್ಯ ಹಾಗೂ ರಾಜಕೀಯ, ಸಾಮಾಜಿಕ, ಸಾಂಘಿಕ, ನೇತಾರರು ಭಾಗವಸಲಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹಂಸ ಕೊಟ್ಟಮುಡಿ, ಯಾವುದೇ ವರ್ಗಕ್ಕೆ ಸೀಮಿತವಾಗದೆ ಮಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಎಲ್ಲಾ ಜನಾಂಗದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮೊದಲಿಗೆ ಎಮ್ಮೆಮಾಡು ಸೂಫಿ ಶಹಿದ್ ದರ್ಗಾದಲ್ಲಿ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಙಳ್ ಪ್ರಾರ್ಥನೆ ನೆರೆವೇರಿಸುವ ಮೂಲಕ ಸಂದೇಶ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಸಂದೇಶ ಯಾತ್ರೆ ನಾಪೋಕ್ಲು ಪಟ್ಟಣದಲ್ಲಿ ತಲುಪುತ್ತಿದ್ದಂತೆ ಸಂಘ ಕುಟುಂಬದ ನೇತಾರರನ್ನು ಆತ್ಮೀಯವಾಗಿ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.
ಈ ಸಂದರ್ಭ ಎಸ್ ವೈ ಎಸ್ ನ ಪ್ರಮುಖರಾದ ಅಮೀಮ್ ತಂಙಳ್, ಸ್ವಾದೀಕ್ ಮಾಸ್ಟರ್ ಮಾಲೆಬೆಟ್ಟು, ಹಂಝತ್ ಉಡುಪಿ, ಹಸೈನಾರ್ ಆನೆಮಹಲ್, ರಝ್ವಿ ಕಲ್ಕತ್ತ, ಹಮೀದ್ ಮುಸ್ಲಿಯಾರ್ ನಗರ್, ಎಸ್ ಎಸ್ ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಅಬ್ದುಲ್ಲ ಸಖಾಫಿ, ಹಮೀದ್ ಕಬಡಕ್ಕೇರಿ, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಆರಫಾತ್, ಅದ್ದು ಹಾಜಿ, ರಹೀಂ ಮಾಸ್ಟರ್, ಹುಸೈನ್ ಸಖಾಫಿ ಸೇರಿದಂತೆ ಸಂಘದ ಕಾರ್ಯಕರ್ತರು ಮತ್ತಿತರರು ಹಾಜರಿದ್ದರು.
ಎಸ್ ವೈ ಎಸ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಸ್ವಾಗತಿಸಿ, ಎಸ್ ವೈ ಎಸ್ ಕೊಡಗು ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್ ಸರ್ವರನ್ನು ವಂದಿಸಿದರು.
ವರದಿ : ಅಶ್ರಫ್









