ಮಡಿಕೇರಿ ಜ.15 : ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಗಿ 50ನೇ ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಜ.20 ಮತ್ತು 21 ರಂದು ಬಿಜಾಪುರದಲ್ಲಿ “ದಲಿತ ಐಕ್ಯತೆ ಸಂಘ ಸಂಘರ್ಷ-ಆರದ ಶೋಷಿತರ ಹಣತೆ” ಅಧ್ಯಯನ ಶಿಬಿರ ನಡೆಯಲಿದ್ದು, ಇದರಲ್ಲಿ ಕೊಡಗು ಜಿಲ್ಲಾ ಸಮಿತಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸಮಿತಿ ಸದಸ್ಯ ಕೆ.ಪಳನಿ ಪ್ರಕಾಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಬಿಜಾಪುರದ ಹರ್ಡೆಕರ್ ಮಂಜಪ್ಪ ಸ್ಮಾರಕ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದ ಬಿ.ಕೃಷ್ಣಪ್ಪ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಕಾಗದ ಕಾರ್ಖಾನೆಯ 4ನೇ ದರ್ಜೆ ನೌಕರರನ್ನು ಸಂಘಟಿಸಿ 1974-75ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಚಳುವಳಿಯನ್ನು ಕಟ್ಟಿದರು. ಇದೀಗ ಸುವರ್ಣ ಸಂಭ್ರಮ ಆಚರಿಸುತ್ತಿರುವ ಸಂಘಟನೆಯ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಎಲ್ಲಾ ಹಂತರ ಪದಾಧಿಕಾರಿಗಳು ಭಾಗಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಹೆಚ್.ಪಿ.ಶಿವಕುಮಾರ್, ಜಿಲ್ಲಾ ಸಂಚಾಲಕ ಹೆಚ್.ಜೆ.ದಾಮೋದರ ಹಾಗೂ ಸಂಘಟನಾ ಸಂಚಾಲಕ ಹೆಚ್.ಟಿ.ಕಾವೇರಪ್ಪ ಉಪಸ್ಥಿತರಿದ್ದರು.









