ಮಡಿಕೇರಿ ಜ.17 : ಸರಕಾರ “ಶಕ್ತಿ” ಯೋಜನೆಯಡಿ ಉಚಿತ ಬಸ್ ಸೇವೆಯನ್ನು ಘೋಷಿಸಿದೆ, ಆದರೆ ನಮಗೆ, ನಮ್ಮ ಅಮ್ಮನಿಗೆ ಈ ಸೇವೆ ಲಭ್ಯವಾಗುತ್ತಿಲ್ಲ. ಗುಣಮಟ್ಟದ ಕಪ್ಪು ಹಲಗೆ, ಶುದ್ಧ ಕುಡಿಯುವ ನೀರು ಬೇಕು. ಹೀಗೆ ಹಲವು ಬೇಡಿಕೆಗಳನ್ನು ಮುಂದಿಟ್ಟವರು ಬಾಳೆಲೆ ವಿಜಯಲಕ್ಷ್ಮಿ ಪ್ರೌಢಶಾಲಾ ವಿದ್ಯಾರ್ಥಿಗಳು.
ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ವತಿಯಿಂದ ವಿಜಯಲಕ್ಷ್ಮಿ ಪ್ರೌಢಶಾಲಾ ವಿದ್ಯಾರ್ಥಿ ಕುಮಾರಿ ಲೇಖಾ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.
ಸಭೆಯಲ್ಲಿ ತಮಗಿರುವ ಕೊರತೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳು ಆಡಳಿತ ವ್ಯವಸ್ಥೆಯ ಕಣ್ತೆರೆಸುವ ಪ್ರಯತ್ನ ಮಾಡಿದರು.
ವಿದ್ಯಾರ್ಥಿನಿ ಸುಶ್ಮಿತಾ ಮಾತನಾಡಿ ಬಾಳೆಲೆ ಭಾಗದಲ್ಲಿ ರಾಜ್ಯ ಸರಕಾರಿ ಬಸ್ ಸಂಚಾರ ಸಮರ್ಪಕವಾಗಿಲ್ಲ. ಇದರಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ನಮ್ಮ ತಾಯಂದಿರು ಉಚಿತ ಬಸ್ ಸೇವೆಯಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದಳು.
ಇತರ ವಿದ್ಯಾರ್ಥಿಗಳು ಮಾತನಾಡಿ ಬಾಳೆಲೆ ಹೋಬಳಿಯ ಕುಗ್ರಾಮಗಳಾದ ಮಲ್ಲೂರು, ಕುಂಬಾರಕಟ್ಟೆ ರಾಜಾಪುರ, ವಡ್ಡರಮಾಡು, ನಿಟ್ಟೂರು ಭಾಗಗಳಿಂದ ಶಾಲೆಗೆ ಬಂದು ಹೋಗಲು ಬಸ್ ವ್ಯವಸ್ಥೆ ಇಲ್ಲದೆ ಇರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಕಾಂಪೌಂಡ್ ನಿರ್ಮಾಣ ಮಾಡಬೇಕು, ಎಲ್ಲಾ ವ್ಯವಸ್ಥೆಗಳಿರುವ ಮೈದಾನವನ್ನು ಕಲ್ಪಿಸಿ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ತರಗತಿಗಳಿಗೆ ಉತ್ತಮ ಗುಣಮಟ್ಟದ ಕಪ್ಪು ಹಲಗೆ ಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮೂಲಕ ಗಮನ ಸೆಳೆದರು.
::: ಭರವಸೆ :::
ವಿದ್ಯಾರ್ಥಿಗಳ ಅಹವಾಲಿಗೆ ಸ್ಪಂದಿಸಿದ ಗ್ರಾ.ಪಂ ಸದಸ್ಯ ಅದೇಂಗಡ ವಿನು ಉತ್ತಪ್ಪ ಅವರು, ಕೆಎಸ್‍ಆರ್‍ಟಿಸಿಯ ಮಡಿಕೇರಿ ಘಟಕದ ವ್ಯವಸ್ಥಾಪಕರಿಗೆ ಕರೆ ಮಾಡಿ ತಕ್ಷಣ ಬಸ್ ವ್ಯವಸ್ಥೆ ಮಾಡಲು ಮನವಿ ಮಾಡಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಚಾರದ ಕುರಿತು ಶಾಸಕರ ಗಮನಕ್ಕೂ ತಂದು ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಗಳಲ್ಲಿ ಬಸ್ ಸೇವೆ ಉತ್ತಮ ಪಡಿಸುವುದಾಗಿ ಭರವಸೆ ನೀಡಿದರು.
ಗ್ರಾ.ಪಂ ಅಧ್ಯಕ್ಷರಾದ ಮುಕ್ಕಾಟಿರ ಜಾನಕಿ ಕಾವೇರಪ್ಪ ಮಾತನಾಡಿ ಮಕ್ಕಳ ಎಲ್ಲಾ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ವ್ಯವಹರಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳು ತಗರತಿಗಳಿಗೆ ಗೈರು ಹಾಜರಾಗಬಾರದು, ಅರ್ಧದಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಪರಿಶ್ರಮದಿಂದ ವ್ಯಾಸಂಗ ಮಾಡಿ ಶೈಕ್ಷಣಿಕ ಗುರಿ ಸಾಧಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಸಶಕ್ತ ಭಾರತವನ್ನು ಕಟ್ಟಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಪ್ತ ಸಮಾಲೋಚಕರಾದ ಅನುಷಾ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.
ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ವಿವಿಧ ಹಕ್ಕುಗಳ ಮೂಲಕ ಕಾನೂನು ವ್ಯವಸ್ಥೆ ಶಕ್ತಿ ತುಂಬಿದೆ. ವಿದ್ಯಾರ್ಥಿಗಳು ತಮ್ಮ ಹಕ್ಕುಗಳನ್ನು ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.
ಸದಸ್ಯರಾದ ಪೊಡಮಾಡ ಸುಖೇಶ್ ಭೀಮಯ್ಯ, ಗ್ರೇಸಿ ಪ್ರಮೀಳ, ಪ್ರಾಂಶುಪಾಲರಾದ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಸ್ವಾಗತಿಸಿ, ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುಬ್ಬಯ್ಯ ಹಾಗೂ ಶಿಕ್ಷಕಿ ನಾಗಶ್ರೀ ಕಾರ್ಯಕ್ರಮದ ಪ್ರಾಮುಖ್ಯತೆಯ ಕುರಿತು ವಿವರಿಸಿದರು.