NEWS DESK ಅಯೋಧ್ಯೆಯಲ್ಲಿ ಜ.22ರಂದು ಶ್ರೀಬಾಲರಾಮ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದು, ಇದು ಭಾರತ ದೇಶದ ಐತಿಹಾಸಿಕ ಕ್ಷಣವಾಗಿದೆ. ಸುಮಾರು 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ.
ದೇಶದ ಕೋಟ್ಯಾಂತರ ಹಿಂದೂಗಳ ಹಲವು ವರ್ಷಗಳ ಪ್ರಾರ್ಥನೆ ಫಲಿಸಿದೆ ಮತ್ತು ರಾಮನೆಲೆಯ ಕನಸು ನನಸಾಗಿದೆ. ಭಾರತೀಯರಿಗೆ ಮರ್ಯಾದ ಪುರುಷ ಶ್ರೀರಾಮನೇ ಸತ್ಯ, ಶ್ರೀರಾಮನೇ ನಿತ್ಯ. ಇದೇ ಕಾರಣಕ್ಕೆ ಅಯೋಧ್ಯೆಯಲ್ಲೊಂದು ಭವ್ಯ ಮಂದಿರ ನಿರ್ಮಾಣವಾಗಲೇಬೇಕೆಂದು ಸಹಸ್ರ ಸಹಸ್ರ ಮಂದಿ ತನು, ಮನ, ಧನವನ್ನು ತ್ಯಾಗ ಮಾಡಿದ್ದಾರೆ, ಬಲಿದಾನ ಗೈದಿದ್ದಾರೆ. 1989 ರ ನಂತರ ರಾಮಜನ್ಮ ಭೂಮಿ ಹೋರಾಟ ತೀವ್ರಗೊಂಡಿತು, ಹಳ್ಳಿಗಳಲ್ಲಿ ರಾಮನಾಮ ಜಾಗೃತಿ ಕಾರ್ಯಕ್ರಮಗಳು ನಡೆದವು.
ಸುಮಾರು 2ಲಕ್ಷಕ್ಕೂ ಅಧಿಕ ಗ್ರಾಮಗಳಿಂದ ರಾಮನಾಮದ ಇಟ್ಟಿಗೆಗಳನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಲಾಯಿತು. ಈ ಹೋರಾಟದಲ್ಲಿ ಕೊಡಗು ಜಿಲ್ಲೆಯ ಜನ ಕೂಡ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೋಟಿ ಕೋಟಿ ಹಿಂದೂಗಳ ಭಕ್ತಿಯ ಪ್ರತೀಕವಾಗಿ ಇಂದು ಎರಡು ಅಂತಸ್ತಿನ ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ. ಶ್ರೀಬಾಲರಾಮನ ಪ್ರತಿಷ್ಠಾಪನೆಯಾಗುತ್ತಿದೆ, ಬಾಲರಾಮನ ಮೂರ್ತಿಯ ಕೆತ್ತನೆ ಕರ್ನಾಟಕದವರಿಂದಲೇ ಆಯಿತು ಎನ್ನುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರವಾಗಿದೆ. ಮಂದಿರ ನಿರ್ಮಾಣದಲ್ಲಿ ನೂರಾರು ಕನ್ನಡಿಗರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಧು, ಸಂತರು ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶ ಪಡೆದಿದ್ದಾರೆ. ಅಯೋಧ್ಯೆಯು ಇಂದು ರಾಮನ ಭವ್ಯ ಕ್ಷೇತ್ರವಾಗಿ ಪ್ರಜ್ವಲಿಸುತ್ತಿದೆ. ಈ ಮಹಾಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದ ಹಿಂದೂ ಸಂಘಟನೆಗಳು ಹಾಗೂ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರಕ್ಕೆ ತಲೆ ಬಾಗಿ ನಾನು ನಮಿಸುತ್ತೇನೆ. ಜ.22 ರಂದು ನಡೆಯವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭ ನಾವೆಲ್ಲರೂ ಶ್ರೀರಾಮ ನಾಮ ಸ್ಮರಣೆಯಲ್ಲಿ ಭಾಗಿಗಳಾಗೋಣ, ಈ ಹೆಮ್ಮೆಯ, ಭಕ್ತಿಯ ಕ್ಷಣವನ್ನು ಸಂಭ್ರಮಿಸೋಣ.
(*ತೇಲಪಂಡ ಶಿವಕುಮಾರ್ ನಾಣಯ್ಯ, ಕಾರ್ಯಕಾರಿ ಸಮಿತಿ ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ*)









