ಅಯೋಧ್ಯೆ ಜ.22 NEWS DESK : ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಅಧಿಕೃತವಾಗಿ ರಾಮಮಂದಿರ ಉದ್ಘಾಟನೆಯಾಗಿದ್ದು, ಮಧ್ಯಾಹ್ನ 12:29:03ಕ್ಕೆ ಆರಂಭವಾದ ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಪ್ರಧಾನಿ ಮೋದಿ ಅವರು ಶ್ರೀ ರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಿದರು. ಸುಮಾರು 500 ವರ್ಷಗಳಿಂದ ಭಾರತದ ಕೋಟ್ಯಾಂತರ ಭಕ್ತರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಗಿದೆ. ವಿಶೇಷ ಹೆಲಿಕಾಪ್ಟರ್‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಛತ್ರಿವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ಇದಾದ ಬಳಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ನೆರವೇರಿಸಿದರು. ಮಂತ್ರ ಘೋಷಗಳು ಮತ್ತು ಮಂಗಳ ವಾದ್ಯಗಳ ಸಂಗೀತದ ನಡುವೆ ಕಾಶಿಯ ಪ್ರಸಿದ್ಧ ವಿದ್ವಾಂಸ ಗಣೇಶ್ವರ್ ದ್ರಾವಿಡ್, ಲಕ್ಷ್ಮೀಕಾಂತ್ ದೀಕ್ಷಿತ್ ಹಾಗೂ ಇಬ್ಬರು ಪ್ರಮುಖ ವಿದ್ವಾಂಸರ ನೇತೃತ್ವದಲ್ಲಿ ವೈದಿಕ ಸಂಪ್ರದಾಯದಂತೆ ಪೂಜಾ ವಿಧಾನಗಳು ನಡೆದವು. 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಂತೆ ರಾಮಮಂದಿರವನ್ನು ನಿರ್ಮಿಸಿ, ಲೋಕಾರ್ಪಣೆ ಮಾಡಿದಂತಾಗಿದೆ. ಸಾವಿರಾರು ಜನರ ಹೋರಾಟ, ಪ್ರಾಣ ತ್ಯಾಗ ಹಾಗೂ ಸುದೀರ್ಘ ಕಾನೂನು ಹೋರಾಟದ ಬಳಿಕ ರಾಮಮಂದಿರದ ಕನಸು ಸಾಕಾರಗೊಂಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ , ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಕೂಡ ಗರ್ಭಗೃಹದಲ್ಲಿ ಹಾಜರಿದ್ದರು. ಬಾಲಿವುಡ್ ನಟರಾಜ್ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಆಯುಷ್ಮಾನ್ ಖುರಾನ, ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮುಕೇಶ್ ಅಂಬಾನಿ ಕುಟುಂಬಸ್ಥರು, ಗಾಯಕರಾದ ಸೋನು ನಿಗಮ್, ತೆಲುಗು ನಟ ಚಿರಂಜೀವಿ, ಅವರ ಪುತ್ರ ರಾಮ್ ಚರಣ್ ತೇಜ್ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.